ನಿರುಪ್ ಭಂಡಾರಿ ನಟನೆಯ ‘ಅತಿಕಾಯ’ಕ್ಕೆ ಸ್ವಾತಿಷ್ಠ ಕೃಷ್ಣನ್ ಎಂಟ್ರಿ; ಹೊಸ ಜೋಡಿಯ ಮೇಲೆ ಸಿನಿಪ್ರಿಯರ ಕಣ್ಣು

2 Min Read
2 Min Read

ಬೆಂಗಳೂರು: ನಟ ನಿರುಪ್ ಭಂಡಾರಿ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಎಂಟರ್‌ಟೈನರ್ ‘ಅತಿಕಾಯ’ ಚಿತ್ರಕ್ಕೆ ನಟಿ ಸ್ವಾತಿಷ್ಠ ಕೃಷ್ಣನ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರದ ಮೂಲಕ ನಿರುಪ್ ಭಂಡಾರಿ ಮತ್ತು ಸ್ವಾತಿಷ್ಠ ಕೃಷ್ಣನ್ ಮೊದಲ ಬಾರಿಗೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ರಂಗಿತರಂಗ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಿರುಪ್ ಭಂಡಾರಿ, ನಿರ್ದೇಶಕ ನಾಗರಾಜ್ ಪೀನ್ಯ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಹಿಂದಿನ ರೊಮ್ಯಾಂಟಿಕ್ ಹಾಗೂ ಚಾಕೊಲೇಟ್ ಹೀರೋ ಇಮೇಜ್‌ನಿಂದ ಹೊರಬಂದು, ಸಂಪೂರ್ಣ ಹೊಸ ರಗಡ್ ಮತ್ತು ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಧಾರವಾಡ ಮೂಲದ ಬಹುಭಾಷಾ ನಟಿ ಸ್ವಾತಿಷ್ಠ ಕೃಷ್ಣನ್, ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ಸವರಕತ್ತಿ’, ‘ಕೀ’, ‘ವಿಕ್ರಮ್’, ‘ಗುಂಡೆ ಕಥಾ ವಿಂತರಾ’, ‘ಒಂದು ಸರಳ ಪ್ರೇಮಕಥೆ’ ಹಾಗೂ ‘ರಕ್ಕಸಪುರದೊಳ್’ ಚಿತ್ರಗಳಲ್ಲಿನ ಅಭಿನಯದ ಮೂಲಕ ಅವರು ಮೆಚ್ಚುಗೆ ಗಳಿಸಿದ್ದಾರೆ.

ಚಿತ್ರತಂಡದ ಮಾಹಿತಿ ಪ್ರಕಾರ, ‘ಅತಿಕಾಯ’ ಚಿತ್ರದಲ್ಲಿ ಸ್ವಾತಿಷ್ಠ ಕೇವಲ ನಾಯಕಿಯಾಗಿ ಮಾತ್ರವಲ್ಲದೆ, ಕಥೆಗೆ ಮಹತ್ವದ ತಿರುವು ನೀಡುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ನಿರುಪ್ ಭಂಡಾರಿ ಅವರ ಸಂಪೂರ್ಣ ದೈಹಿಕ ರೂಪಾಂತರ. ರಕ್ತದ ಕಲೆಗಳಿಂದ ಕೂಡಿದ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿರುವ ಅವರು, ಪಾತ್ರಕ್ಕೆ ಜೀವ ತುಂಬಲು ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಅವರ ಹೊಸ ಗೆಟಪ್, ದೇಹಭಾಷೆ ಹಾಗೂ ಸಂಭಾಷಣೆಯ ಶೈಲಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ.

‘ಪದೇ ಪದೇ’ ಹಾಗೂ ‘ನಮಕ್ ಹರಾಮ್’ ಚಿತ್ರಗಳ ನಿರ್ದೇಶಕ ನಾಗರಾಜ್ ಪೀನ್ಯ, ವಿರಾಮದ ಬಳಿಕ ಈ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರು ನಗರದ ನೈಜ ಸ್ಥಳಗಳಲ್ಲಿ, ಯಾವುದೇ ಸೆಟ್‌ಗಳನ್ನು ನಿರ್ಮಿಸದೇ ನಡೆಸಲಾಗಿದ್ದು, ಕಥೆಗೆ ನೈಜತೆ ತರುವ ಪ್ರಯತ್ನ ಮಾಡಲಾಗಿದೆ.

ಜೆ. ಮಹೇಶ್ ಕುಮಾರ್ ಅವರ ಪ್ರಸ್ತುತಿಯಲ್ಲಿ ಎಎನ್ ಮೂವಿ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ಚಿತ್ರದಲ್ಲಿ ಹರೀಶ್ ರೈ, ದಿನೇಶ್ ಮಂಗಳೂರು, ಬಿ. ಸುರೇಶ್, ಕಾಕ್‌ರೋಚ್ ಸುಧಿ, ವಜ್ರದೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಲಿ ಜಾಕ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಅವರ ಸಂಕಲನ ಹಾಗೂ ಸಚಿನ್ ಬಸ್ರೂರ್ ಅವರ ಸಂಗೀತವಿದೆ. ಸದ್ಯ ಚಿತ್ರ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.

Share This Article