ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ, ಅವರ ಮೊಮ್ಮಗಳು ಅಪ್ಸರಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ಕುಟುಂಬ ಅನುಭವಿಸಿದ ನೋವು, ಅಕ್ಕ ವರ್ಷಾ ಅವರ ನೆನಪು ಹಾಗೂ ತಮ್ಮ ವಿರುದ್ಧ ವ್ಯಕ್ತವಾದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಜುಲೈ 11ರಂದು 88ನೇ ವಯಸ್ಸಿನಲ್ಲಿ ಹೃದಯ ಸಂಬಂಧಿತ ಸಮಸ್ಯೆಯಿಂದ ಎಸ್. ಜಾನಕಿ ನಿಧನರಾಗಿದ್ದರು. ಅವರ ಅಗಲಿಕೆಯ ಕೆಲವೇ ದಿನಗಳ ಬಳಿಕ ಅಪ್ಸರಾ ಬರೆದುಕೊಂಡ ಭಾವನಾತ್ಮಕ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಅಪ್ಸರಾ ತಮ್ಮ ಸಂದೇಶದಲ್ಲಿ, “ನನ್ನ ಅಜ್ಜಿ ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿ ನನ್ನ ಅಕ್ಕ ವರ್ಷಾ. ಅವರಿಬ್ಬರ ನಡುವಿನ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಂದು ಅಜ್ಜಿ ಬಯಸಿದ ಎಲ್ಲಾ ಜವಾಬ್ದಾರಿಗಳನ್ನು ನಾನು ನಿಭಾಯಿಸುತ್ತಿದ್ದೇನೆ. ಆದರೆ ಇಲ್ಲಿ ನಿಲ್ಲಬೇಕಾಗಿದ್ದವರು ನಾನು ಅಲ್ಲ, ವರ್ಷಾ. 2023ರ ಆಗಸ್ಟ್‌ನಲ್ಲಿ ನಾವು ವರ್ಷಾಳನ್ನು ಕಳೆದುಕೊಂಡೆವು. ಆ ನೋವಿನಿಂದ ನಮ್ಮ ಕುಟುಂಬ ಇನ್ನೂ ಹೊರಬಂದಿಲ್ಲ. ದುಃಖ ಎಂದಿಗೂ ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಈಗ ನನಗೆ ಸಮಾಧಾನ ನೀಡುತ್ತಿರುವ ಏಕೈಕ ವಿಚಾರವೆಂದರೆ ಅಜ್ಜಿ ಮತ್ತು ವರ್ಷಾ ಮತ್ತೆ ಒಂದಾಗಿದ್ದಾರೆ ಎಂಬ ನಂಬಿಕೆ,” ಎಂದು ಬರೆದುಕೊಂಡಿದ್ದಾರೆ.
ತಮ್ಮ ಸಾರ್ವಜನಿಕ ದುಃಖ ವ್ಯಕ್ತಪಡಿಸುವ ರೀತಿಯನ್ನು ಪ್ರಶ್ನಿಸಿದವರಿಗೆ ಪ್ರತಿಕ್ರಿಯಿಸಿದ ಅಪ್ಸರಾ, “ನನ್ನ ಕಣ್ಣೀರನ್ನು ನೋಡಿ ನನ್ನ ಪ್ರೀತಿಯನ್ನು ಅಳೆಯಬೇಡಿ. ಸಾವನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದನ್ನು ನಮಗೆ ಕಲಿಸಿದವರು ನನ್ನ ಅಜ್ಜಿ. ಜೀವನ ಅಂತ್ಯವಾಗಬಹುದು, ಆದರೆ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಅವರು ನಂಬಿದ್ದರು. ಜೀವನದ ಅನುಭವಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ದುಃಖ ಯಾವಾಗಲೂ ಜೋರಾಗಿ ವ್ಯಕ್ತವಾಗಬೇಕೆಂದಿಲ್ಲ; ಕೆಲವೊಮ್ಮೆ ಅದು ಮನಸ್ಸಿನೊಳಗೆ ಮೌನವಾಗಿ ಉಳಿಯುತ್ತದೆ,” ಎಂದು ಹೇಳಿದ್ದಾರೆ.
ಎಸ್. ಜಾನಕಿ ಅವರ ನಿಧನದ ಬಳಿಕ ಕುಟುಂಬದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಹಾಗೂ ಆಧಾರರಹಿತ ಊಹಾಪೋಹಗಳ ಬಗ್ಗೆಯೂ ಅಪ್ಸರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮ್ಮ ಕುಟುಂಬದ ಬಗ್ಗೆ ಏನೂ ತಿಳಿಯದವರು ತಮ್ಮದೇ ಕಥೆಗಳನ್ನು ಸೃಷ್ಟಿಸುವುದು ನೋವುಂಟು ಮಾಡುತ್ತದೆ. ನನ್ನ ಅಜ್ಜಿ ಅತ್ಯಂತ ಸರಳ, ದಯಾಳು ಮತ್ತು ವಿನಮ್ರ ವ್ಯಕ್ತಿಯಾಗಿದ್ದರು. ಎಲ್ಲರಲ್ಲೂ ಒಳ್ಳೆಯತನವನ್ನೇ ಕಾಣುವ ಗುಣ ಅವರದ್ದು. ವರ್ಷಾ ಕೂಡ ಅದೇ ಸ್ವಭಾವ ಹೊಂದಿದ್ದರು. ಅವರಿಬ್ಬರೂ ಈಗ ಮತ್ತೆ ಒಂದಾಗಿದ್ದಾರೆ ಎಂಬ ನಂಬಿಕೆಯೇ ನನಗೆ ಮುಂದುವರಿಯುವ ಶಕ್ತಿ ನೀಡುತ್ತಿದೆ,” ಎಂದು ಅಪ್ಸರಾ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.


