ಆರೆಸ್ಟ್ ವಾರಂಟ್‌ ಸುದ್ದಿ ಸುಳ್ಳು: ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್!

1 Min Read
1 Min Read

ಕನ್ನಡದ ಖ್ಯಾತ ನಟ Prakash Raj ವಿರುದ್ಧ ಮತದಾರರ ಗುರುತಿನ ಚೀಟಿ (Voter ID) ಪ್ರಕರಣದಲ್ಲಿ ಜಾಮೀನು ರಹಿತ ಬಂಧನ ವಾರಂಟ್‌ (NBW) ಜಾರಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಂದೇ ಹೆಸರಿನಲ್ಲಿ ನಾಲ್ಕು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಆರೋಪದಡಿ ಬೆಂಗಳೂರು ನ್ಯಾಯಾಲಯ ವಾರಂಟ್ ಹೊರಡಿಸಿದೆ ಎಂಬ ವರದಿಗಳು ಹರಿದಾಡಿದ್ದವು.

ಕೆಲವು ವರದಿಗಳ ಪ್ರಕಾರ, ದಿಲೀಪ್ ಕುಮಾರ್ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಸಮನ್ಸ್‌ಗಳಿಗೂ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿಯಾಗಿದೆ ಎಂದು ಹೇಳಲಾಗಿತ್ತು.

ಆದರೆ ಈ ಎಲ್ಲ ಸುದ್ದಿಗಳನ್ನು ನಟ ಪ್ರಕಾಶ್ ರಾಜ್ ತಳ್ಳಿಹಾಕಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ವಿರುದ್ಧ ಹರಿದಾಡುತ್ತಿರುವ ವರದಿಗಳನ್ನು “ಸುಳ್ಳು ಸುದ್ದಿ” ಎಂದು ಖಂಡಿಸಿದ್ದಾರೆ.

“ತಮ್ಮನ್ನು ತಾವೇ ಮಾರಿಕೊಂಡವರು ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹರಡುತ್ತಿದ್ದಾರೆ. ಅವರಿಗೆ ಬಹಳ ನೋವಾಗಿರಬೇಕು. ಆದರೆ ಅವರನ್ನು ಬ್ಯುಸಿಯಾಗಿಟ್ಟಿರುವುದಕ್ಕೆ ನನಗೆ ಸಂತೋಷವಿದೆ” ಎಂದು ವ್ಯಂಗ್ಯಭರಿತವಾಗಿ ಬರೆದು ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ವಿಚಾರದಲ್ಲಿಯೂ ಪ್ರಕಾಶ್ ರಾಜ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ತಮ್ಮ ವಿರುದ್ಧ ಹರಿದಾಡಿದ ಊಹಾಪೋಹಗಳಿಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಪ್ರಕರಣದ ಪ್ರಮುಖ ಸಾಕ್ಷಿದಾರ ಚಿನ್ನಯ್ಯ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯನ್ನು ತನಿಖಾ ಅಧಿಕಾರಿಗಳಿಗೆ ಒದಗಿಸಿದ್ದಾಗಿ ತಿಳಿಸಿದ್ದರು.

ಪ್ರಸ್ತುತ, ಬಂಧನ ವಾರಂಟ್ ಕುರಿತ ಸುದ್ದಿಗಳ ಸತ್ಯಾಸತ್ಯತೆ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಅವರ ಸ್ಪಷ್ಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

Share This Article