ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರವು ವಿಶ್ವದಾದ್ಯಂತ ₹100 ಕೋಟಿ ಕ್ಲಬ್ ಸೇರಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳಾ ಪ್ರಧಾನ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಈ ಐತಿಹಾಸಿಕ ಯಶಸ್ಸಿನ ಬಳಿಕ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
ಸುಮಾರು ಮೂರು ವರ್ಷಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಮರಳಿದ ಸಮಂತಾ, ತಮ್ಮ ಆಪ್ತ ಸ್ನೇಹಿತೆ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಟ್ರಲಾಲಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಜ್ ನಿಧಿಮೋರು ಹಾಗೂ ಹಿಮಾಂಶು ಅವರೊಂದಿಗೆ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಚಿತ್ರವು ಜೂನ್ 19ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.
ಚಿತ್ರ ₹100 ಕೋಟಿ ಗಡಿ ದಾಟಿದ ನಂತರ ಸಮಂತಾ, ಬಿಡುಗಡೆಯ ಮುನ್ನ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾಗುವ ಮೊದಲು, ‘ಈ ಚಿತ್ರದ ಬಗ್ಗೆ ಜನರಿಗೆ ಗೊತ್ತಿದೆಯೇ? ನಮ್ಮ ಪ್ರಚಾರ ಜನರನ್ನು ತಲುಪುತ್ತಿದೆಯೇ?’ ಎಂಬ ಆತಂಕ ತಮ್ಮನ್ನು ಕಾಡುತ್ತಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
ಈ ವೇಳೆ ತಮ್ಮ ಸ್ನೇಹಿತನೊಬ್ಬ ಬಿ-ಸೆಂಟರ್ನ ಚಿತ್ರಮಂದಿರದ ಪ್ರದರ್ಶಕರಿಗೆ ಕರೆ ಮಾಡಿ, ಚಿತ್ರದ ಆರಂಭಿಕ ಪ್ರದರ್ಶನದ ಬಗ್ಗೆ ಅಭಿಪ್ರಾಯ ಕೇಳಿದ್ದನ್ನು ಸಮಂತಾ ನೆನಪಿಸಿಕೊಂಡಿದ್ದಾರೆ.
ಪ್ರದರ್ಶಕರು, ‘ಹೀರೋಯಿನ್ ಪ್ರಧಾನ ಸಿನಿಮಾ ನೋಡಲು ಯಾರು ಬರುತ್ತಾರೆ? ದೊಡ್ಡ ಹೀರೋ ಜೊತೆ ನಟಿಸಿದರೆ ಮಾತ್ರ ಜನ ನೋಡುತ್ತಾರೆ. ನಾಯಕಿಯೊಬ್ಬಳನ್ನು ಕೇಂದ್ರವಾಗಿಟ್ಟ ಸಿನಿಮಾ ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದ್ದರು ಎಂದು ಸಮಂತಾ ತಿಳಿಸಿದ್ದಾರೆ.
ಈ ಪ್ರತಿಕ್ರಿಯೆ ಆ ಸಮಯದಲ್ಲಿ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಇದ್ದ ಮನೋಭಾವವನ್ನು ಪ್ರತಿಬಿಂಬಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸಮಂತಾ ತಮ್ಮ ಪೋಸ್ಟ್ನಲ್ಲಿ, ‘ಯಾರಾದರೂ ಅಪಾಯವನ್ನು ಸ್ವೀಕರಿಸಿದಾಗಲೇ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ. ಅನೇಕ ಬಾರಿ ಆ ಅಪಾಯ ಫಲ ನೀಡುವುದಿಲ್ಲ. ಆದರೆ ಕೆಲವೊಮ್ಮೆ ಅದು ಇತಿಹಾಸ ನಿರ್ಮಿಸುತ್ತದೆ. ನಮ್ಮ ಪಾಲಿಗೆ ಈ ಬಾರಿ ಅದು ಯಶಸ್ವಿಯಾಯಿತು’ ಎಂದು ಬರೆದಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾಗಳನ್ನು ಚಿತ್ರರಂಗವು ಹೊಸ ದೃಷ್ಟಿಯಿಂದ ನೋಡುವಂತೆ ಈ ಚಿತ್ರದ ಯಶಸ್ಸು ಪ್ರೇರಣೆ ನೀಡಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಿ ಅಥವಾ ಸಿ ಸೆಂಟರ್ನ ಚಿತ್ರಮಂದಿರದ ಪ್ರದರ್ಶಕರನ್ನು ಮಹಿಳಾ ಪ್ರಧಾನ ಚಿತ್ರದ ಬಗ್ಗೆ ಕೇಳಿದಾಗ, ‘ಯಾರು ನೋಡುತ್ತಾರೆ?’ ಎಂಬ ಉತ್ತರದ ಬದಲು ‘ನೋಡೋಣ’ ಎಂಬ ವಿಶ್ವಾಸದ ಉತ್ತರ ಬರಲಿ ಎಂಬುದೇ ನನ್ನ ಆಶಯ ಎಂದು ಸಮಂತಾ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.


