ನವದೆಹಲಿ: ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮಜಯಂತಿ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಉಪರಾಷ್ಟ್ರಪತಿ ಭವನದಲ್ಲಿ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶಿಕ್ಷಣ ತಜ್ಞ, ದೂರದೃಷ್ಟಿಯ ರಾಜಕಾರಣಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಿದ ನಾಯಕರಾಗಿದ್ದರು ಎಂದು ಬಣ್ಣಿಸಿದರು. ಭಾರತದ ಶಿಕ್ಷಣ, ರಾಜಕೀಯ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಅವರ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿರಲಿದೆ ಎಂದು ಹೇಳಿದರು.
ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಕುಲಪತಿಯಾಗಿ, ಸಂವಿಧಾನ ಸಭೆಯ ಸದಸ್ಯರಾಗಿ, ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ, ಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಹಾಗೂ ಭಾರತೀಯ ಜನಸಂಘದ ಸಂಸ್ಥಾಪಕರಾಗಿ ಡಾ. ಮುಖರ್ಜಿ ದೇಶಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ ಎಂದು ಉಪರಾಷ್ಟ್ರಪತಿ ಸ್ಮರಿಸಿದರು.
ರಾಷ್ಟ್ರೀಯ ಏಕತೆ ಮತ್ತು ಅಖಂಡತೆಗೆ ಬದ್ಧರಾಗಿದ್ದ ಡಾ. ಮುಖರ್ಜಿ ಅವರು ಜಮ್ಮು-ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಹೋರಾಟ ನಡೆಸುವ ವೇಳೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದು ಅವರು ಹೇಳಿದರು.
ಅವರ ಜೀವನ, ಆದರ್ಶಗಳು ಮತ್ತು ರಾಷ್ಟ್ರಪ್ರೇಮವು ಬಲಿಷ್ಠ, ಏಕೀಕೃತ, ಸ್ವಾವಲಂಬಿ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪಕ್ಕೆ ಇಂದಿಗೂ ಪ್ರೇರಣೆಯಾಗಿವೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.


