ಜಾಗತಿಕ ತೈಲ ಮಾರುಕಟ್ಟೆ ಸ್ಥಿರತೆಗೆ OPEC+ ಮಹತ್ವದ ನಿರ್ಧಾರ; ಆಗಸ್ಟ್‌ನಿಂದ ಉತ್ಪಾದನೆ ಹೆಚ್ಚಳ

1 Min Read
1 Min Read

ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ OPEC+ ಆಗಸ್ಟ್ ತಿಂಗಳಿಂದ ಕಚ್ಚಾ ತೈಲ ಉತ್ಪಾದನೆಯನ್ನು ದಿನಕ್ಕೆ 1.88 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಜಾಗತಿಕ ತೈಲ ಮಾರುಕಟ್ಟೆಯ ಪರಿಸ್ಥಿತಿಯನ್ನು ಪರಿಶೀಲಿಸಲು ನಡೆದ ವರ್ಚುವಲ್ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.

ಸಭೆಯ ಬಳಿಕ ಬಿಡುಗಡೆಗೊಂಡ ಪ್ರಕಟಣೆಯ ಪ್ರಕಾರ, ಸೌದಿ ಅರೇಬಿಯಾ, ರಷ್ಯಾ, ಇರಾಕ್, ಕುವೈತ್, ಕಝಾಕಿಸ್ತಾನ, ಅಲ್ಜೀರಿಯಾ ಹಾಗೂ ಒಮಾನ್ ಸೇರಿದಂತೆ OPEC+ ಸದಸ್ಯ ರಾಷ್ಟ್ರಗಳು ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆ ಸಮತೋಲನ ಕಾಪಾಡುವ ಉದ್ದೇಶದಿಂದ ಉತ್ಪಾದನೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿವೆ.

ಸದಸ್ಯ ರಾಷ್ಟ್ರಗಳು ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ಹಾಗೂ ಹೊಂದಾಣಿಕೆಯ (Flexible) ನೀತಿಯನ್ನು ಮುಂದುವರಿಸುವುದಾಗಿ ತಿಳಿಸಿವೆ. ಅಗತ್ಯವಿದ್ದಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವುದು, ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಅಥವಾ ಕಡಿಮೆ ಮಾಡುವ ಆಯ್ಕೆಯೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿವೆ.

OPEC+ ಸದಸ್ಯ ರಾಷ್ಟ್ರಗಳು ಜಾಗತಿಕ ತೈಲ ಮಾರುಕಟ್ಟೆಯ ಮೇಲ್ವಿಚಾರಣೆಯನ್ನು ಮುಂದುವರಿಸಿ, ಪರಸ್ಪರ ಒಪ್ಪಿಕೊಂಡಿರುವ ಉತ್ಪಾದನಾ ಗುರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪುನರುಚ್ಚರಿಸಿವೆ.

OPEC+ ರಾಷ್ಟ್ರಗಳ ಮುಂದಿನ ಸಭೆ ಆಗಸ್ಟ್ 2ರಂದು ನಡೆಯಲಿದೆ.

Share This Article
Leave a Comment