ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ದಿವಂಗತ ಆಯತೊಲ್ಲಾ ಅಲಿ ಖಾಮೆನೇಯಿ ಅವರ ಅಂತಿಮ ಪ್ರಾರ್ಥನಾ ವಿಧಿವಿಧಾನಗಳು ಇಂದು ಟೆಹ್ರಾನ್‌ನಲ್ಲಿ ನೆರವೇರಿದವು. ದೇಶದ ರಾಜಕೀಯ, ಸೇನಾ ಹಾಗೂ ಧಾರ್ಮಿಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ರಾಜ್ಯ ದೂರದರ್ಶನ ಪ್ರಸಾರ ಮಾಡಿದ ದೃಶ್ಯಗಳಲ್ಲಿ ಖಾಮೆನೇಯಿ ಅವರ ಪುತ್ರರಾದ ಮಸೂದ್, ಮೇಸಮ್ ಮತ್ತು ಮೊಸ್ತಫಾ ಅವರು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿರುವುದು ಕಂಡುಬಂತು. ರಾಷ್ಟ್ರಪತಿ ಮಸೂದ್ ಪೆಜೆಶ್ಕಿಯನ್, ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ಹಿರಿಯ ಸೇನಾ ಅಧಿಕಾರಿಗಳೂ ಹಾಜರಿದ್ದರು.
ಆದರೆ, ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಾಮೆನೇಯಿ ಕಾರ್ಯಕ್ರಮದಲ್ಲಿ ಕಾಣಿಸದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಕಳೆದ ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಾಮೆನೇಯಿ, ಅವರ ಕುಟುಂಬದ ಕೆಲ ಸದಸ್ಯರು ಹಾಗೂ ಹಲವು ಹಿರಿಯ ಇರಾನಿ ಅಧಿಕಾರಿಗಳು ಮೃತಪಟ್ಟಿದ್ದರು. ಬಳಿಕ ಮೊಜ್ತಬಾ ಖಾಮೆನೇಯಿ ಸುಪ್ರೀಂ ನಾಯಕನಾಗಿ ಅಧಿಕಾರ ಸ್ವೀಕರಿಸಿದ್ದರೂ, ಅವರು ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಮೊಜ್ತಬಾ ಅವರ ಗೈರುಹಾಜರಾತಿ ಹಿನ್ನೆಲೆಯಲ್ಲಿ ಇರಾನ್‌ನ ಹೊಸ ನಾಯಕನ ಭದ್ರತೆ ಹಾಗೂ ಅವರ ಪ್ರಸ್ತುತ ಇರುವಿಕೆಯ ಬಗ್ಗೆ ವಿವಿಧ ಊಹಾಪೋಹಗಳು ವ್ಯಕ್ತವಾಗುತ್ತಿವೆ.
ಅಲಿ ಖಾಮೆನೇಯಿ ಅವರ ಅಂತಿಮ ಯಾತ್ರೆ ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯಲಿದ್ದು, ಈ ತಿಂಗಳ 9ರಂದು ಪವಿತ್ರ ನಗರ ಮಶ್ಹದ್ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಬಳಿಕ ದೇಶಾದ್ಯಂತ 40 ದಿನಗಳ ಸಾರ್ವಜನಿಕ ಶೋಕಾಚರಣೆ ನಡೆಯಲಿದೆ


