ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪಾಕಿಸ್ತಾನ ಮೂಲದ 23 ಮಂದಿಯನ್ನು ಭಯೋತ್ಪಾದಕರಾಗಿ ಅಧಿಕೃತವಾಗಿ ಘೋಷಿಸಿದೆ.
ಈ ವ್ಯಕ್ತಿಗಳು ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT) ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಸಚಿವಾಲಯ ತಿಳಿಸಿದೆ.
17 ಪಾಕಿಸ್ತಾನಿ, 6 ಭಾರತೀಯರು
ಆಕಾಶವಾಣಿಯ ವರದಿ ಪ್ರಕಾರ, ಪಟ್ಟಿ ಮಾಡಲಾದ 23 ಮಂದಿಯಲ್ಲಿ 17 ಮಂದಿ ಪಾಕಿಸ್ತಾನ ಪ್ರಜೆಗಳಾಗಿದ್ದು, 6 ಮಂದಿ ಭಾರತೀಯ ಮೂಲದವರಾಗಿದ್ದಾರೆ. ಆದರೆ ಪ್ರಸ್ತುತ ಎಲ್ಲರೂ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ (PoJK) ಪ್ರದೇಶಗಳಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ
ಈ ಭಯೋತ್ಪಾದಕರು ಭಾರತ ವಿರೋಧಿ ಚಟುವಟಿಕೆಗಳು, ಉಗ್ರ ದಾಳಿಗಳ ಸಂಚು, ಗಡಿ ನುಸುಳುವಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಉಗ್ರ ಸಂಘಟನೆಗಳಿಗೆ ನೆರವು, ಹಣಕಾಸು ಸಂಗ್ರಹಣೆ ಹಾಗೂ ಹೊಸ ಉಗ್ರರ ನೇಮಕಾತಿ ಸೇರಿದಂತೆ ಹಲವು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
NIAಗೆ ಹೆಚ್ಚಿನ ಅಧಿಕಾರ
ಈ ಘೋಷಣೆಯೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ತನಿಖಾ ಸಂಸ್ಥೆಗಳು ಸಂಬಂಧಿತ ವ್ಯಕ್ತಿಗಳ ಹಣಕಾಸು ಮೂಲಗಳನ್ನು ಸ್ಥಗಿತಗೊಳಿಸುವುದು, ಆಸ್ತಿಗಳನ್ನು ಜಪ್ತಿ ಮಾಡುವುದು ಹಾಗೂ ಶಸ್ತ್ರಾಸ್ತ್ರ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲು ಕಾನೂನುಬದ್ಧ ಅಧಿಕಾರ ಪಡೆಯಲಿವೆ.
2019ರ ತಿದ್ದುಪಡಿಯ ಬಳಿಕ 80 ಮಂದಿ ಪಟ್ಟಿ
2019ರಲ್ಲಿ UAPA ಕಾಯ್ದೆಗೆ ತಿದ್ದುಪಡಿ ತಂದು, ಕೇವಲ ಸಂಘಟನೆಗಳನ್ನಷ್ಟೇ ಅಲ್ಲದೆ ವೈಯಕ್ತಿಕರನ್ನೂ ಭಯೋತ್ಪಾದಕರಾಗಿ ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿತ್ತು.
ಆ ತಿದ್ದುಪಡಿ ಜಾರಿಯಾದ ನಂತರ ಇದುವರೆಗೆ ಒಟ್ಟು 80 ಮಂದಿಯನ್ನು ಭಯೋತ್ಪಾದಕರಾಗಿ ಕೇಂದ್ರ ಸರ್ಕಾರ ಘೋಷಿಸಿದೆ.


