ಕುನೋದಲ್ಲಿ ರಾಷ್ಟ್ರಪತಿ ಮುರ್ಮು: ‘ಪ್ರಾಜೆಕ್ಟ್ ಚೀತಾ’ ಪ್ರಗತಿ ಪರಿಶೀಲನೆ

1 Min Read
1 Min Read

ಭಾರತದಲ್ಲಿ ಚೀತಾಗಳ ಮರುಪರಿಚಯಕ್ಕಾಗಿ ಜಾರಿಗೊಳಿಸಲಾಗಿರುವ ಮಹತ್ವಾಕಾಂಕ್ಷಿ ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಪ್ರಗತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಪರಿಶೀಲಿಸಿದರು.

ಉದ್ಯಾನಕ್ಕೆ ಭೇಟಿ ನೀಡಿದ ರಾಷ್ಟ್ರಪತಿಗೆ ಚೀತಾ ನಿರ್ವಹಣಾ ಪ್ರದೇಶ (Cheetah Management Area) ಕುರಿತು ಅಧಿಕಾರಿಗಳು ವಿವರವಾದ ಮಾಹಿತಿ ನೀಡಿದರು. ಚೀತಾಗಳಿಗೆ ಅನುಕೂಲಕರವಾದ ವಾಸಸ್ಥಳ, ಸಮೃದ್ಧ ಆಹಾರ ಸರಪಳಿ ಹಾಗೂ ಕಡಿಮೆ ಮಾನವ ಹಸ್ತಕ್ಷೇಪ ಇರುವ ಹಿನ್ನೆಲೆಯಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನ್ನು ದೇಶದ ಮೊದಲ ಚೀತಾ ಮರುಪರಿಚಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ರಾಷ್ಟ್ರಪತಿ ಮುರ್ಮು ಅವರು ಕುನೋ ಉದ್ಯಾನದಲ್ಲಿ ಸಫಾರಿ ನಡೆಸಿ ಚೀತಾಗಳ ಚಟುವಟಿಕೆಗಳನ್ನು ವೀಕ್ಷಿಸಿದರು. ಜೊತೆಗೆ ಚೀತಾ ಮಿತ್ರರಾಗಿ ಕಾರ್ಯನಿರ್ವಹಿಸುತ್ತಿರುವ ಸಹರಿಯಾ ಬುಡಕಟ್ಟು ಸಮುದಾಯದ ಸದಸ್ಯರು, ಚೀತಾ ಟ್ರ್ಯಾಕರ್‌ಗಳು, ಅರಣ್ಯ ಸಿಬ್ಬಂದಿ ಹಾಗೂ ಪ್ರವಾಸಿ ಮಾರ್ಗದರ್ಶಕರೊಂದಿಗೆ ಸಂವಾದ ನಡೆಸಿ ಯೋಜನೆಯ ಅನುಭವಗಳನ್ನು ತಿಳಿದುಕೊಂಡರು.

ಇದಕ್ಕೂ ಮುನ್ನ ರಾಷ್ಟ್ರಪತಿ ಅವರು ಕುನೋದಲ್ಲಿರುವ ಚೀತಾ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿ, ಯೋಜನೆಗೆ ಸಂಬಂಧಿಸಿದ ವಿಶೇಷ ಪ್ರದರ್ಶನ ವೀಕ್ಷಿಸಿದರು. ಈ ವೇಳೆ ಅಧಿಕಾರಿಗಳು ಭಾರತದಲ್ಲಿ ಪ್ರಸ್ತುತ 52 ಚೀತಾಗಳು ಇರುವುದಾಗಿ ಮಾಹಿತಿ ನೀಡಿದರು. ಅವುಗಳಲ್ಲಿ 49 ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇದ್ದು, ಉಳಿದ 3 ಚೀತಾಗಳನ್ನು ಗಾಂಧೀ ಸಾಗರ್ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿದೆ.

ಚೀತಾಗಳ ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳ ಕುರಿತು ಕೂಡ ರಾಷ್ಟ್ರಪತಿಗೆ ವಿವರಿಸಲಾಯಿತು. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ನಮೀಬಿಯಾದಿಂದ ತರಲಾದ ಎಂಟು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡುವ ಮೂಲಕ ‘ಪ್ರಾಜೆಕ್ಟ್ ಚೀತಾ’ಗೆ ಚಾಲನೆ ನೀಡಿದ್ದರು. ನಂತರ ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್‌ವಾನಾದಿಂದಲೂ ಚೀತಾಗಳನ್ನು ಭಾರತಕ್ಕೆ ತರಲಾಗಿದೆ.

Share This Article
Leave a Comment