ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪಾಕಿಸ್ತಾನ ಮೂಲದ 23 ಮಂದಿಯನ್ನು ಅಧಿಕೃತವಾಗಿ ‘ಭಯೋತ್ಪಾದಕರು’ ಎಂದು ಘೋಷಿಸಿದೆ. ಇವರು ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT) ಸೇರಿದಂತೆ ಹಲವು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಗೃಹ ಸಚಿವಾಲಯದ ಪ್ರಕಾರ, ಈ ವ್ಯಕ್ತಿಗಳು ನುಸುಳಿಕೆ (Infiltration), ಉಗ್ರರ ನೇಮಕಾತಿ, ಶಸ್ತ್ರಾಸ್ತ್ರಗಳ ಪೂರೈಕೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಗಳ ಸಂಚು ರೂಪಿಸುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಘೋಷಣೆಯೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಅವರ ಆರ್ಥಿಕ ಮೂಲಗಳನ್ನು ಸ್ಥಗಿತಗೊಳಿಸುವುದು, ಶಸ್ತ್ರಾಸ್ತ್ರಗಳ ಪೂರೈಕೆಗೆ ನಿರ್ಬಂಧ ಹೇರುವುದು ಹಾಗೂ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರ ಲಭ್ಯವಾಗಲಿದೆ.
2019ರ ಆಗಸ್ಟ್ 14ರಂದು ಜಾರಿಗೆ ಬಂದ UAPA ತಿದ್ದುಪಡಿ ಕಾಯ್ದೆ, ಭಾರತದ ಭಯೋತ್ಪಾದನೆ ವಿರುದ್ಧದ ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ. ಈ ತಿದ್ದುಪಡಿಯ ಮೂಲಕ, ಸಂಘಟನೆಗಳಷ್ಟೇ ಅಲ್ಲದೆ ವ್ಯಕ್ತಿಗಳನ್ನೂ ನೇರವಾಗಿ ‘ಭಯೋತ್ಪಾದಕರು’ ಎಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
ಈ ತಿದ್ದುಪಡಿ ಜಾರಿಯಾದ ನಂತರ ಇದುವರೆಗೆ ಒಟ್ಟು 80 ಮಂದಿಯನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.


