ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯೊಂದಿಗೆ ಆಕಸ್ಮಿಕ ಪ್ರವಾಹ (ಫ್ಲ್ಯಾಶ್ ಫ್ಲಡ್) ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (MeT) ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇಂದಿನಿಂದ ನಾಳೆಯವರೆಗೆ ಕೇಂದ್ರಾಡಳಿತ ಪ್ರದೇಶದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಸುರಿಯಲಿದೆ. ವಿಶೇಷವಾಗಿ ಮಧ್ಯಾಹ್ನ, ಸಂಜೆ ಹಾಗೂ ತಡರಾತ್ರಿ ಅಥವಾ ಮುಂಜಾನೆ ವೇಳೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಕೆಲ ಪ್ರದೇಶಗಳಲ್ಲಿ ಅಲ್ಪಾವಧಿಯಲ್ಲೇ ಭಾರೀ ಮಳೆ ಹಾಗೂ ತೀವ್ರ ಗುಡುಗು-ಮಿಂಚು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಜುಲೈ 6ರಿಂದ 9ರವರೆಗೆ, ರಾಜ್ಯದಲ್ಲಿ ಸಾಮಾನ್ಯವಾಗಿ ಬಿಸಿ ಹಾಗೂ ಆರ್ದ್ರ ವಾತಾವರಣ ಮುಂದುವರಿಯಲಿದ್ದು, ಹಲವು ಪ್ರದೇಶಗಳಲ್ಲಿ ಮಧ್ಯಂತರವಾಗಿ ಸಾಧಾರಣ ಮಳೆ ಮತ್ತು ಕೆಲವೆಡೆ ತೀವ್ರ ಮಳೆಯಾಗುವ ಸಾಧ್ಯತೆ ಇದೆ.
ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳು, ಹಳ್ಳಗಳು (ನಲ್ಲಾಗಳು), ಹೊಳೆಗಳು ಹಾಗೂ ನದಿಪಾತ್ರಗಳ ಸಮೀಪಕ್ಕೆ ಸಾರ್ವಜನಿಕರು ತೆರಳಬಾರದು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ದುರ್ಬಲ ಪ್ರದೇಶಗಳಲ್ಲಿ ಭಾರೀ ಮಳೆಯ ಪರಿಣಾಮ ಆಕಸ್ಮಿಕ ಪ್ರವಾಹ ಮತ್ತು ಭೂಕುಸಿತ ಸಂಭವಿಸಬಹುದಾದ ಕಾರಣ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.


