‘ಬಮ್ ಬಮ್ ಭೋಲೆ’ ಘೋಷಣೆ ನಡುವೆ ಅಮರನಾಥ ಯಾತ್ರೆಗೆ ಚಾಲನೆ; ಪಹಲ್ಗಾಮ್, ಬಾಲ್ಟಾಲ್ ಮಾರ್ಗಗಳಲ್ಲಿ ಭಕ್ತರ ಸಂಚಾರ ಆರಂಭ
ಜಮ್ಮು-ಕಾಶ್ಮೀರದಲ್ಲಿ ವಾರ್ಷಿಕ ಶ್ರೀ ಅಮರನಾಥ ಯಾತ್ರೆ ಶುಕ್ರವಾರ ಬೆಳಿಗ್ಗೆ ಪಹಲ್ಗಾಮ್ ಹಾಗೂ ಬಾಲ್ಟಾಲ್ ಎರಡೂ ಮಾರ್ಗಗಳಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. 57 ದಿನಗಳ ಕಾಲ ನಡೆಯಲಿರುವ ಈ ಪವಿತ್ರ ಯಾತ್ರೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಸಮುದ್ರಮಟ್ಟದಿಂದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಪವಿತ್ರ ಗುಹೆಗೆ ತೆರಳುವ ಭಕ್ತರು, ಸ್ವಯಂಭೂವಾಗಿ ರೂಪುಗೊಳ್ಳುವ ಹಿಮ ಶಿವಲಿಂಗದ ದರ್ಶನ ಪಡೆದು ಭಗವಾನ್ ಶಿವನ ಆಶೀರ್ವಾದ ಪಡೆಯಲಿದ್ದಾರೆ.
ಈ ವರ್ಷದ ಯಾತ್ರೆ ಆಗಸ್ಟ್ 28ರಂದು ರಕ್ಷಾಬಂಧನ ಹಬ್ಬದ ದಿನ ಸಮಾಪ್ತಿಗೊಳ್ಳಲಿದೆ. ಇಂದು ಬೆಳಗ್ಗೆ ನುನ್ವಾನ್ (ಪಹಲ್ಗಾಮ್) ಮತ್ತು ಬಾಲ್ಟಾಲ್ ಮೂಲ ಶಿಬಿರಗಳಿಂದ ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು 4,800ಕ್ಕೂ ಹೆಚ್ಚು ಯಾತ್ರಿಕರ ಮೊದಲ ತಂಡ ಅಮರನಾಥ ಗುಹೆಯತ್ತ ಪ್ರಯಾಣ ಬೆಳೆಸಿತು.
‘ಬಮ್ ಬಮ್ ಭೋಲೆ’ ಹಾಗೂ ‘ಹರ್ ಹರ್ ಮಹಾದೇವ್’ ಘೋಷಣೆಗಳ ನಡುವೆ ಸಾವಿರಾರು ಭಕ್ತರು ಭಕ್ತಿ ಮತ್ತು ಉತ್ಸಾಹದಿಂದ ಯಾತ್ರೆಯನ್ನು ಆರಂಭಿಸಿದರು. ಭಕ್ತರು ಅನಂತನಾಗ್ ಜಿಲ್ಲೆಯ 48 ಕಿ.ಮೀ. ಉದ್ದದ ನುನ್ವಾನ್–ಪಹಲ್ಗಾಮ್ ಮಾರ್ಗ ಹಾಗೂ ಗಾಂದರ್ಬಲ್ ಜಿಲ್ಲೆಯ 14 ಕಿ.ಮೀ. ಉದ್ದದ ಕಡಿದಾದ ಬಾಲ್ಟಾಲ್ ಮಾರ್ಗ ಮೂಲಕ ಪವಿತ್ರ ಗುಹೆಯನ್ನು ತಲುಪಲಿದ್ದಾರೆ.
ಯಾತ್ರಿಕರ ಅನುಕೂಲಕ್ಕಾಗಿ ಎರಡೂ ಮಾರ್ಗಗಳಲ್ಲಿ ವೈದ್ಯಕೀಯ ಶಿಬಿರಗಳು, ವಿಶ್ರಾಂತಿ ಕೇಂದ್ರಗಳು, ಲಂಗರ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಹಾಗೂ ತಕ್ಷಣದ ಹವಾಮಾನ ಮಾಹಿತಿ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಯಾತ್ರೆ ಸುಗಮ ಮತ್ತು ಸುರಕ್ಷಿತವಾಗಿ ನಡೆಯುವಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.
ಇದೇ ವೇಳೆ, ಎರಡನೇ ತಂಡದ ಯಾತ್ರಿಕರು ಜಮ್ಮುವಿನಿಂದ ಇಂದು ಬೆಳಿಗ್ಗೆ ಹೊರಟಿದ್ದು, ಮಧ್ಯಾಹ್ನ ವೇಳೆಗೆ ಕಾಶ್ಮೀರ ಕಣಿವೆಯನ್ನು ತಲುಪುವ ನಿರೀಕ್ಷೆಯಿದೆ.


