ಪಹಲ್ಗಾಮ್ ದಾಳಿ ಖಂಡಿಸಿದ ಮೋದಿ–ಟಕೈಚಿ; ಉಗ್ರರ ವಿರುದ್ಧ ಜಾಗತಿಕ ಒಗ್ಗಟ್ಟಿಗೆ ಕರೆ

2 Min Read
2 Min Read

ಭಯೋತ್ಪಾದನೆಗೆ ಭಾರತ–ಜಪಾನ್ ಕಠಿಣ ಸಂದೇಶ; ಗಡಿಪಾರ ಉಗ್ರಗಾಮಿತ್ವವನ್ನೂ ತೀವ್ರ ಖಂಡನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಸಾನೆ ಟಕೈಚಿ ಅವರು ಎಲ್ಲಾ ರೂಪಗಳ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು, ಅದರಲ್ಲೂ ಪಾಕಿಸ್ತಾನದಿಂದ ನಡೆಯುತ್ತಿರುವ ಗಡಿಪಾರ ಭಯೋತ್ಪಾದನೆಯನ್ನು ತೀವ್ರವಾಗಿ ಮತ್ತು ಸ್ಪಷ್ಟವಾಗಿ ಖಂಡಿಸಿದ್ದಾರೆ.

16ನೇ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಘೋಷಣೆಯಲ್ಲಿ, ಕಳೆದ ವರ್ಷದ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಉಭಯ ನಾಯಕರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಅಲ್ಲದೆ, ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಕುರಿತು ಉಲ್ಲೇಖಿಸಿರುವ 2025ರ ಜುಲೈ 29ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ತಂಡದ ವರದಿಯನ್ನೂ ಅವರು ಗಮನಕ್ಕೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್ 10ರಂದು ದೆಹಲಿಯಲ್ಲಿ ನಡೆದ ಉಗ್ರ ದಾಳಿಯನ್ನೂ ಉಭಯ ನಾಯಕರು ಖಂಡಿಸಿದ್ದು, ಈ ಕೃತ್ಯದ ಸಂಚುಕೋರರು, ಸಂಘಟಕರು ಮತ್ತು ಹಣಕಾಸು ಪೂರೈಕೆದಾರರನ್ನು ಶೀಘ್ರವೇ ಕಾನೂನಿನ ಮುಂದೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಅಲ್‌ಖೈದಾ, ಐಸಿಸ್ (ದಾಯೇಶ್), ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಸೇರಿದಂತೆ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಎಲ್ಲಾ ಉಗ್ರ ಸಂಘಟನೆಗಳು ಮತ್ತು ಅವುಗಳ ಅಂಗಸಂಸ್ಥೆಗಳ ವಿರುದ್ಧ ಸಮನ್ವಯಿತ ಕ್ರಮ ಕೈಗೊಳ್ಳುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ.

ಉಗ್ರರ ಸುರಕ್ಷಿತ ತಾಣಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುವ ಜಾಲವನ್ನು ಧ್ವಂಸಗೊಳಿಸುವುದು, ಅಂತರರಾಷ್ಟ್ರೀಯ ಅಪರಾಧ ಜಾಲಗಳೊಂದಿಗಿನ ಸಂಪರ್ಕವನ್ನು ಕಡಿದುಹಾಕುವುದು ಹಾಗೂ ಗಡಿಪಾರ ಉಗ್ರರ ಸಂಚಾರಕ್ಕೆ ತಡೆ ಒಡ್ಡುವುದು ಅಗತ್ಯ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ, ಸಮಾನ ಮನೋಭಾವದ ರಾಷ್ಟ್ರಗಳೊಂದಿಗೆ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಇಬ್ಬರೂ ನಾಯಕರು ಬದ್ಧತೆ ವ್ಯಕ್ತಪಡಿಸಿದರು. ಕ್ವಾಡ್ (Quad) ಸಹಕಾರದಡಿ ನಡೆಯುತ್ತಿರುವ ಪ್ರಗತಿಯನ್ನು ಸ್ವಾಗತಿಸಿದ ಅವರು, ಸಮುದ್ರ ಭದ್ರತೆ, ಆರ್ಥಿಕ ಭದ್ರತೆ, ಪ್ರಮುಖ ಖನಿಜಗಳು, ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಮಾನವೀಯ ನೆರವು ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆ ಸೇರಿದಂತೆ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವುದಾಗಿ ತಿಳಿಸಿದರು.

ಇದಲ್ಲದೆ, ಆಸಿಯಾನ್ (ASEAN) ಸದಸ್ಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಗಟ್ಟಿಗೊಳಿಸುವ ಮೂಲಕ ಪ್ರಾದೇಶಿಕ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಮಹತ್ವವನ್ನೂ ಉಭಯ ನಾಯಕರು ಒತ್ತಿ ಹೇಳಿದರು.

Share This Article
Leave a Comment