ಉಕ್ಕು ಆಮದು ಸಮಸ್ಯೆಗಳ ಕುರಿತು ಜುಲೈ 9ರಂದು ಮುಕ್ತ ಸಂವಾದ; ಕೇಂದ್ರ ಉಕ್ಕು ಸಚಿವಾಲಯದ ಮಹತ್ವದ ಸಭೆ
ಉಕ್ಕು (ಸ್ಟೀಲ್) ಆಮದುಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕೈಗಾರಿಕೆಗಳ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಕೇಂದ್ರ ಉಕ್ಕು ಸಚಿವಾಲಯ ಜುಲೈ 9ರಂದು ನವದೆಹಲಿಯಲ್ಲಿ ‘ಓಪನ್ ಹೌಸ್’ (ಮುಕ್ತ ಸಂವಾದ) ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಉಕ್ಕು ಆಮದುಗೆ ಸಂಬಂಧಿಸಿದ ಸಮಸ್ಯೆಗಳು, ಸಲಹೆಗಳು ಹಾಗೂ ಬೇಡಿಕೆಗಳನ್ನು ಕಂಪನಿಗಳು ಮತ್ತು ಕೈಗಾರಿಕಾ ಸಂಘಟನೆಗಳು ನೇರವಾಗಿ ಸಚಿವಾಲಯದ ಮುಂದೆ ಮಂಡಿಸಬಹುದಾಗಿದೆ.
ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಕಂಪನಿಗಳು ಹಾಗೂ ಸಂಘಟನೆಗಳಿಗೆ ಇ-ಮೇಲ್ ಮೂಲಕ ಪ್ರತ್ಯೇಕ ಸಮಯವನ್ನು ನಿಗದಿಪಡಿಸಿ ಮಾಹಿತಿ ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ವ್ಯವಸ್ಥಾಪನಾ ಕಾರಣಗಳಿಂದ ವಾಕ್-ಇನ್ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವಾಲಯ, ಹೆಚ್ಚಿನ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿ ಸಂಸ್ಥೆಯಿಂದ ಒಬ್ಬ ಪ್ರತಿನಿಧಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಉಕ್ಕು ಆಮದುಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೈಗಾರಿಕಾ ವಲಯದೊಂದಿಗೆ ನೇರ ಸಂವಾದ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.


