ಇಂದು ಮೋದಿ–ತಕೈಚಿ ಶೃಂಗಸಭೆ: ಭಾರತ–ಜಪಾನ್ ಸಂಬಂಧಕ್ಕೆ ಮತ್ತಷ್ಟು ಬಲ
ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು ಇಂದು ನವದೆಹಲಿಯಲ್ಲಿ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ನಡೆಸಲಿದ್ದಾರೆ. ಈ ಮಹತ್ವದ ಸಭೆಯಲ್ಲಿ ಭಾರತ–ಜಪಾನ್ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದ್ದು, ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಮಾತುಕತೆ ಬಳಿಕ ಹಲವು ಮಹತ್ವದ ಒಪ್ಪಂದ ಪತ್ರಗಳಿಗೆ (MoUs) ಸಹಿ ಬೀಳುವ ನಿರೀಕ್ಷೆಯಿದೆ.
ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು ಮೂರು ದಿನಗಳ ಅಧಿಕೃತ ಭಾರತ ಪ್ರವಾಸದ ಅಂಗವಾಗಿ ನಿನ್ನೆ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರ ಇದು ಮೊದಲ ಭಾರತ ಭೇಟಿ. ಈ ಭೇಟಿ ಭಾರತ–ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಹಾಗೂ ಜಾಗತಿಕ ಸಹಭಾಗಿತ್ವಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ–ಜಪಾನ್ ಸಂಬಂಧದಲ್ಲಿ ಆರ್ಥಿಕ ಭದ್ರತೆ (Economic Security) ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. 2024ರ ನವೆಂಬರ್‌ನಲ್ಲಿ ಟೋಕಿಯೊದಲ್ಲಿ ನಡೆದ ಮೊದಲ ಆರ್ಥಿಕ ಭದ್ರತಾ ಸಂವಾದದಲ್ಲಿ ಸೆಮಿಕಂಡಕ್ಟರ್‌ಗಳು, ಪ್ರಮುಖ ಖನಿಜ ಸಂಪನ್ಮೂಲಗಳು, ಔಷಧೋದ್ಯಮ, ಶುದ್ಧ ಇಂಧನ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರಗಳನ್ನು ಕಾರ್ಯತಂತ್ರದ ಸಹಕಾರಕ್ಕೆ ಆದ್ಯತೆಯ ವಲಯಗಳಾಗಿ ಗುರುತಿಸಲಾಗಿತ್ತು.
ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸನಾಯೆ ತಕೈಚಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದಕ್ಕೂ ಮೊದಲು ಕಳೆದ ವರ್ಷ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲೂ ಉಭಯ ನಾಯಕರು ಭೇಟಿಯಾಗಿದ್ದರು.
2025ರ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಆರಂಭಿಸಲಾದ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಕಾರ ಕಾರ್ಯಯೋಜನೆ ಅಡಿಯಲ್ಲಿ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಐದು ಲಕ್ಷ ಜನರ ವಿನಿಮಯ ಗುರಿ ಹೊಂದಲಾಗಿದೆ. ಇದರಲ್ಲಿ ಭಾರತದಿಂದ ಜಪಾನ್‌ಗೆ 50 ಸಾವಿರ ನುರಿತ ಹಾಗೂ ಅರೆ-ನುರಿತ ಮಾನವ ಸಂಪನ್ಮೂಲ ಕಳುಹಿಸುವ ಯೋಜನೆಯೂ ಸೇರಿದೆ.
ವಾರ್ಷಿಕ ಶೃಂಗಸಭೆಗಳ ಜೊತೆಗೆ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲೂ ಭಾರತ–ಜಪಾನ್ ನಡುವೆ ನಿಯಮಿತ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ.


