10 ವರ್ಷ ಪೂರೈಸಿದ GeM; ಭಾರತದ ಡಿಜಿಟಲ್ ಸಾರ್ವಜನಿಕ ಖರೀದಿ ವ್ಯವಸ್ಥೆಯ ಹೊಸ ಮೈಲಿಗಲ್ಲು

1 Min Read
1 Min Read

ನವದೆಹಲಿ: ಭಾರತ ಸರ್ಕಾರದ ಗವರ್‌ನ್ಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM) ತನ್ನ 10ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 10 ದಿನಗಳ ವಿಶೇಷ ಸಂಭ್ರಮಕ್ಕೆ ಶುಕ್ರವಾರ ಚಾಲನೆ ನೀಡಿದೆ. ಇದೇ ವೇಳೆ, GeMನ 10ನೇ ಸಂಸ್ಥಾಪನಾ ದಿನದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು.

ಈ ಲೋಗೋವು ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ವಿಶ್ವಾಸಾರ್ಹ ಡಿಜಿಟಲ್ ಸಾರ್ವಜನಿಕ ಖರೀದಿ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ GeM ಸಾಧಿಸಿರುವ ಯಶಸ್ವಿ ಪಯಣವನ್ನು ಪ್ರತಿಬಿಂಬಿಸುತ್ತದೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ GeM ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಿಹಿರ್ ಕುಮಾರ್, ಕಳೆದ ಹತ್ತು ವರ್ಷಗಳ ಸಂಸ್ಥೆಯ ಪರಿವರ್ತನಾ ಪಯಣವನ್ನು ಸ್ಮರಿಸಿದರು. ಜೊತೆಗೆ, ಮುಂದಿನ ಹಂತದಲ್ಲಿ ಬೆಳವಣಿಗೆ, ತಂತ್ರಜ್ಞಾನ ಆವಿಷ್ಕಾರ ಮತ್ತು ಪಾಲುದಾರ ಕೇಂದ್ರಿತ ಸಾರ್ವಜನಿಕ ಖರೀದಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ವಿವರಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆ ನೀಡಿದ್ದು, ಈ ಸಂಭ್ರಮದ ಆರಂಭವು ದೇಶಾದ್ಯಂತ ವರ್ಷಪೂರ್ತಿ ನಡೆಯಲಿರುವ ವಿವಿಧ ಪಾಲುದಾರರ ಸಹಭಾಗಿತ್ವ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ಅಭಿಯಾನಗಳಿಗೆ ನಾಂದಿ ಹಾಡಿದೆ ಎಂದು ತಿಳಿಸಿದೆ.

ಇದರ ಅಂಗವಾಗಿ ಮುಂದಿನ ತಿಂಗಳ 5ರಂದು ‘ಖರೀದಿದಾರರ ಸಭೆ (Buyer Meet)’ ಹಾಗೂ 10ರಂದು ‘ಮಾರಾಟಗಾರರ ರೌಂಡ್‌ಟೇಬಲ್ (Seller Roundtable)’ ಆಯೋಜಿಸಲಾಗುತ್ತದೆ. GeM ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಅತ್ಯುತ್ತಮ ಕೊಡುಗೆ ನೀಡಿದ ಖರೀದಿದಾರರು ಮತ್ತು ಮಾರಾಟಗಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

Share This Article