ಮಾಜಿ ಸೇನಾ ಮುಖ್ಯಸ್ಥರ ರಾಜೀನಾಮೆ ಸುದ್ದಿ ಸುಳ್ಳು; ವೈರಲ್ ವಿಡಿಯೊ AI ಡೀಪ್‌ಫೇಕ್ ಎಂದು ಕೇಂದ್ರ ಸ್ಪಷ್ಟನೆ
ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಸಂಪೂರ್ಣ ನಕಲಿಯಾಗಿದ್ದು, ಅದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಡೀಪ್‌ಫೇಕ್ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಮೂಲದ ಪ್ರಚಾರ ಖಾತೆಗಳು ಈ ವಿಡಿಯೊವನ್ನು ಹರಿಬಿಟ್ಟು, ಜನರಲ್ ಉಪೇಂದ್ರ ದ್ವಿವೇದಿ ಅವರು ಪ್ರತಿಭಟನೆಯಾಗಿ ರಾಜೀನಾಮೆ ನೀಡಿ, ಸೇನೆಯ ಜವಾಬ್ದಾರಿಯನ್ನು ಜನರಲ್ ಧೀರಜ್ ಸೇಠ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಹರಡುತ್ತಿವೆ.
ಈ ಕುರಿತು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಿಡಿಯೊ ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಡೀಪ್‌ಫೇಕ್ ಆಗಿದೆ. ಜನರಲ್ ಉಪೇಂದ್ರ ದ್ವಿವೇದಿ ಅವರು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದೆ.
ಸೇನೆ ಮುಖ್ಯಸ್ಥರ ಬದಲಾವಣೆ ಎನ್ನುವುದು ಯಾವುದೇ ವಿವಾದದ ಫಲವಲ್ಲ. ನಾಲ್ಕು ದಶಕಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಬಳಿಕ ಜನರಲ್ ಉಪೇಂದ್ರ ದ್ವಿವೇದಿ ಅವರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ, ನಿಗದಿತ ಸೇವಾ ಅವಧಿ ಮತ್ತು ನಿಯಮಾನುಸಾರ ಸೇನಾ ಮುಖ್ಯಸ್ಥರ ಹುದ್ದೆಯ ವರ್ಗಾವಣೆ ನಡೆಸಲಾಗಿದೆ ಎಂದು PIB ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಪ್ರಕಾರ, ಪಾಕಿಸ್ತಾನದ ಪ್ರಚಾರ ಖಾತೆಗಳು ಸಂಘಟಿತ ಅಪಪ್ರಚಾರ ಅಭಿಯಾನದ ಭಾಗವಾಗಿ ಇಂತಹ ನಕಲಿ ವಿಡಿಯೊಗಳು ಮತ್ತು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ, ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ.
ಇಂತಹ ಸುಳ್ಳು ಸುದ್ದಿಗಳನ್ನು ನಂಬದೇ, ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.


