ಭಾರತ ಪ್ರವಾಸಕ್ಕೆ ಜಪಾನ್ ಪ್ರಧಾನಿ ಸಾನೆ ಟಕೈಚಿ; ನಾಳೆ ಮೋದಿ ಜೊತೆ ವಾರ್ಷಿಕ ಶೃಂಗಸಭೆ
ಜಪಾನ್ ಪ್ರಧಾನಿ ಸಾನೆ ಟಕೈಚಿ ಅವರು ಮೂರು ದಿನಗಳ ಅಧಿಕೃತ ಭಾರತ ಪ್ರವಾಸಕ್ಕಾಗಿ ಇಂದು ಸಂಜೆ ನವದೆಹಲಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ಬಳಿಕ ಟಕೈಚಿ ಅವರ ಇದು ಮೊದಲ ಭಾರತ ಭೇಟಿಯಾಗಿದೆ.
ನಾಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯಲಿರುವ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ, ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಭಾರತ ಮತ್ತು ಜಪಾನ್ ನಡುವಿನ ಸಂಬಂಧವು ಶತಮಾನಗಳ ಸಾಂಸ್ಕೃತಿಕ, ನಾಗರಿಕತೆಯ ಹಾಗೂ ಆಧ್ಯಾತ್ಮಿಕ ಬಾಂಧವ್ಯದ ಮೇಲೆ ನಿರ್ಮಾಣವಾಗಿದ್ದು, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಂತಹ ಸಾಮಾನ್ಯ ಮೌಲ್ಯಗಳನ್ನು ಎರಡೂ ರಾಷ್ಟ್ರಗಳು ಹಂಚಿಕೊಂಡಿವೆ.
2014ರಲ್ಲಿ ಭಾರತ-ಜಪಾನ್ ಸಂಬಂಧವನ್ನು ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆ (Special Strategic and Global Partnership) ಮಟ್ಟಕ್ಕೆ ಏರಿಸಲಾಗಿತ್ತು. 2027ರಲ್ಲಿ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ, ವ್ಯಾಪಾರ, ಹೂಡಿಕೆ, ಆರ್ಥಿಕ ಭದ್ರತೆ, ರಕ್ಷಣಾ ಸಹಕಾರ, ವಿಜ್ಞಾನ-ತಂತ್ರಜ್ಞಾನ, ಸಂಸ್ಕೃತಿ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಿಸುತ್ತಿದೆ.
ಭಾರತ-ಜಪಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) 2011ರ ಆಗಸ್ಟ್ 1ರಿಂದ ಜಾರಿಗೆ ಬಂದಿದೆ. 2025-26ನೇ ಸಾಲಿನಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ 27 ಬಿಲಿಯನ್ ಅಮೆರಿಕನ್ ಡಾಲರ್ ದಾಟಿದ್ದು, ಜಪಾನ್ ಭಾರತದಲ್ಲಿ ಐದನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ. ಏಪ್ರಿಲ್ 2000ರಿಂದ ಮಾರ್ಚ್ 2026ರವರೆಗೆ ಜಪಾನ್ ಭಾರತದಲ್ಲಿ 48.17 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.
ಯೋಗ, ಬೌದ್ಧ ಧರ್ಮ ಹಾಗೂ ಸಾಂಸ್ಕೃತಿಕ ಪರಂಪರೆಯ ಮೂಲಕ ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ಬಾಂಧವ್ಯವೂ ನಿರಂತರವಾಗಿ ಬಲಗೊಳ್ಳುತ್ತಿದೆ.


