ದ್ವಾರಕಾ ಎಕ್ಸ್‌ಪ್ರೆಸ್‌ವೇ–ವಸಂತ್ ಕುಂಜ್ ಸಂಪರ್ಕಕ್ಕೆ ಮೆಗಾ ಟನಲ್; ಕೇಂದ್ರ ಸಚಿವ ಸಂಪುಟದ ಒಪ್ಪಿಗೆ

2 Min Read
2 Min Read

ದೆಹಲಿಗೆ ₹6,969 ಕೋಟಿ ವೆಚ್ಚದ 6 ಲೇನ್ ಸುರಂಗ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ರಾಜಧಾನಿ ದೆಹಲಿಯಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು ವಸಂತ್ ಕುಂಜ್‌ನ ನೆಲ್ಸನ್ ಮಂಡೇಲಾ ಮಾರ್ಗದೊಂದಿಗೆ ಸಂಪರ್ಕಿಸುವ 6 ಲೇನ್ ರಾಷ್ಟ್ರೀಯ ಹೆದ್ದಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಸುಮಾರು 8.1 ಕಿಲೋಮೀಟರ್ ಉದ್ದದ ಈ ಯೋಜನೆಗೆ ₹6,969 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.

ಈ ಯೋಜನೆಯಿಂದ ಪಶ್ಚಿಮ ಮತ್ತು ದಕ್ಷಿಣ ದೆಹಲಿಯ ನಡುವೆ ವೇಗದ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದ್ದು, ಅರ್ಬನ್ ಎಕ್ಸ್‌ಟೆನ್ಶನ್ ರೋಡ್-2 (UER-II)/ದ್ವಾರಕಾ ಎಕ್ಸ್‌ಪ್ರೆಸ್‌ವೇ ನೇರವಾಗಿ ವಸಂತ್ ಕುಂಜ್ ಸಂಪರ್ಕ ಪಡೆಯಲಿದೆ. ಜೊತೆಗೆ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸಲು 1.8 ಕಿಲೋಮೀಟರ್ ಉದ್ದದ ಎಲಿವೇಟೆಡ್ ರಸ್ತೆ ನಿರ್ಮಾಣವೂ ಯೋಜನೆಯ ಭಾಗವಾಗಿದೆ.

ಇದೇ ವೇಳೆ, ಎಐಐಎಂಎಸ್‌ನಿಂದ ಮಹಿಪಾಲ್‌ಪುರದವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಪ್ರಸ್ತಾವವನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಿಟ್ಟಿದೆ ಎಂದು ಸಚಿವರು ತಿಳಿಸಿದರು.

ಈ ಯೋಜನೆಯಿಂದ ಸುಮಾರು 7.54 ಲಕ್ಷ ಮಾನವ-ದಿನಗಳ ನೇರ ಉದ್ಯೋಗ ಹಾಗೂ 9.80 ಲಕ್ಷ ಮಾನವ-ದಿನಗಳ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಹೇಳಿದರು.

ಇದರ ಜೊತೆಗೆ, ಉತ್ತರ ಪ್ರದೇಶದ ಕಾನ್ಪುರ–ಕಬ್ರೈ ನಡುವಿನ 117.7 ಕಿಲೋಮೀಟರ್ ಉದ್ದದ 4/6 ಲೇನ್ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿ-34 ಯೋಜನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ₹7,145 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಈ ಹೆದ್ದಾರಿಯಿಂದ ಕಾನ್ಪುರ ಮತ್ತು ಕಬ್ರೈ ನಡುವಿನ ಪ್ರಯಾಣದ ಅವಧಿ 3.5 ಗಂಟೆಯಿಂದ ಕೇವಲ 1.5 ಗಂಟೆಗೆ ಇಳಿಕೆಯಾಗಲಿದ್ದು, ಸಾಗರ್, ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಹಲವು ಭಾಗಗಳೊಂದಿಗೆ ವೇಗದ ಸಂಪರ್ಕವೂ ಲಭ್ಯವಾಗಲಿದೆ.

ಯೋಜನೆಯು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ, ಕಾನ್ಪುರ ರಿಂಗ್ ರೋಡ್ ಹಾಗೂ ಹಲವು ರಾಜ್ಯ ಹೆದ್ದಾರಿಗಳೊಂದಿಗೆ ಸಂಪರ್ಕವನ್ನು ಬಲಪಡಿಸಲಿದೆ. ಗಂಟೆಗೆ 80ರಿಂದ 100 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಈ ಕಾರಿಡಾರ್ ವಿನ್ಯಾಸಗೊಳಿಸಲಾಗಿದೆ.

ಈ ಯೋಜನೆಯಿಂದ ಸುಮಾರು 1.2 ಕೋಟಿ ಮಾನವ-ದಿನಗಳ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

Share This Article
Leave a Comment