ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಜನ್ಮಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇಶದ ಇತಿಹಾಸದ ಮಹತ್ವದ ಘಟ್ಟದಲ್ಲಿ ಭಾರತವನ್ನು ಪ್ರಗತಿಯತ್ತ ಮುನ್ನಡೆಸಲು ಪಿ.ವಿ. ನರಸಿಂಹ ರಾವ್ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ಅವರು ದಕ್ಷ ಆಡಳಿತಗಾರರಾಗಿದ್ದು, ಅಪಾರ ಜ್ಞಾನ ಹೊಂದಿದ ವಿದ್ವಾಂಸರಾಗಿದ್ದರು. ಭಾರತದ ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಆಳವಾದ ಅರಿವು ಹೊಂದಿದ್ದ ಅವರು ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಿದ್ದರು ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪಿ.ವಿ. ನರಸಿಂಹ ರಾವ್ ಅವರಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ, ರಾವ್ ಅವರನ್ನು ದೂರದೃಷ್ಟಿಯ ನಾಯಕ ಹಾಗೂ ಶ್ರೇಷ್ಠ ರಾಜಕಾರಣಿಯೆಂದು ಬಣ್ಣಿಸಿದ ಅವರು, ಭಾರತದ ಆರ್ಥಿಕ ಸುಧಾರಣೆಗೆ ಹೊಸ ದಿಕ್ಕು ನೀಡಿದ ನಾಯಕತ್ವವನ್ನು ದೇಶ ಸದಾ ಸ್ಮರಿಸಲಿದೆ ಎಂದು ಹೇಳಿದರು.


