ನವದೆಹಲಿ: ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ. ವಿದೇಶಾಂಗ ಸಚಿವಾಲಯ ಪ್ರಕಟಿಸಿರುವ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು–2026ರ ಪ್ರಕಾರ, ಸಾಮಾನ್ಯ 36 ಪುಟಗಳ ಹೊಸ ಪಾಸ್‌ಪೋರ್ಟ್ ಅಥವಾ ಮರುನೀಡಿಕೆಗೆ ಇನ್ನುಮುಂದೆ 2,500 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ತತ್ಕಾಲ್ ಯೋಜನೆಯಡಿ 36 ಪುಟಗಳ ಹೊಸ ಪಾಸ್‌ಪೋರ್ಟ್ ಅಥವಾ ಮರುನೀಡಿಕೆಗೆ 5,000 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇದೇ ವೇಳೆ, 60 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಅಥವಾ ಅದರ ಮರುನೀಡಿಕೆಗೆ 3,500 ರೂ. ಹಾಗೂ ತತ್ಕಾಲ್ ಸೇವೆಯಡಿ 6,000 ರೂ. ಶುಲ್ಕ ವಿಧಿಸಲಾಗುತ್ತದೆ.
ಈವರೆಗೆ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್‌ಗೆ 1,500 ರೂ. ಮತ್ತು 60 ಪುಟಗಳ ಪಾಸ್‌ಪೋರ್ಟ್‌ಗೆ 2,000 ರೂ. ಶುಲ್ಕವಿತ್ತು.
ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್‌ಗೆ ಬದಲಿಯಾಗಿ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು 5,000 ರೂ., 60 ಪುಟಗಳ ಪಾಸ್‌ಪೋರ್ಟ್‌ಗೆ 6,000 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಈ ಪರಿಷ್ಕೃತ ಶುಲ್ಕ ವ್ಯವಸ್ಥೆ ಜುಲೈ 1, 2026ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.


