ನವದೆಹಲಿ: ದೇಶದ ಔಪಚಾರಿಕ ಸೇವಾ ವಲಯದ ಅಲ್ಪಾವಧಿಯ ಆರ್ಥಿಕ ಚಟುವಟಿಕೆಗಳನ್ನು ಮಾಸಿಕವಾಗಿ ಅಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೊದಲ ಪ್ರಯೋಗಾತ್ಮಕ ‘ಇಂಡೆಕ್ಸ್ ಆಫ್ ಸರ್ವಿಸಸ್ ಪ್ರೊಡಕ್ಷನ್’ (Index of Services Production – ISP) ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಸೇವಾ ವಲಯದ ಬೆಳವಣಿಗೆಯನ್ನು ಅಳೆಯುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
2024–25 ಅನ್ನು ಆಧಾರ ವರ್ಷವಾಗಿಟ್ಟುಕೊಂಡು ಸಿದ್ಧಪಡಿಸಲಾದ ಈ ಮೊದಲ ಸೂಚ್ಯಂಕವು 2026ರ ಏಪ್ರಿಲ್ ತಿಂಗಳ ಮಾಹಿತಿಯನ್ನು ಒಳಗೊಂಡಿದ್ದು, ದೇಶದ ಔಪಚಾರಿಕ ಸೇವಾ ವಲಯದ ಸುಮಾರು 60 ಶೇಕಡಾ ಪಾಲನ್ನು ಪ್ರತಿನಿಧಿಸುವ 19 ಉಪವಲಯಗಳನ್ನು ಒಳಗೊಂಡಿದೆ.
ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಈ ಸೂಚ್ಯಂಕವನ್ನು ಭಾರತದ ಸೇವಾ ವಲಯದ ಕಾರ್ಯಕ್ಷಮತೆಯನ್ನು ಇನ್ನಷ್ಟು ನಿಖರವಾಗಿ ಅಳೆಯುವ ಹಾಗೂ ದೇಶದ ಅಂಕಿಅಂಶ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ.
ಪ್ರಯೋಗಾತ್ಮಕ ಸರಣಿಯ ಸ್ಥಿರತೆಯನ್ನು ಪರಿಶೀಲಿಸಿದ ಬಳಿಕ ಹಾಗೂ ಹೆಚ್ಚಿನ ಉಪವಲಯಗಳನ್ನು ಸೇರಿಸಿದ ನಂತರ ಸಮಗ್ರ ಇಂಡೆಕ್ಸ್ ಆಫ್ ಸರ್ವಿಸಸ್ ಪ್ರೊಡಕ್ಷನ್ ಅನ್ನು ಅಧಿಕೃತವಾಗಿ ಪರಿಚಯಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಈ ಸೂಚ್ಯಂಕದ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, 2026ರ ಏಪ್ರಿಲ್‌ನಲ್ಲಿ 19 ಉಪವಲಯಗಳ ಪೈಕಿ 14 ವಲಯಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಎರಡಂಕಿ (ಡಬಲ್ ಡಿಜಿಟ್) ಬೆಳವಣಿಗೆ ದಾಖಲಿಸಿವೆ. ಉಳಿದ ಬಹುತೇಕ ವಲಯಗಳಲ್ಲಿಯೂ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ.
ಅತಿವೇಗವಾಗಿ ಬೆಳವಣಿಗೆ ದಾಖಲಿಸಿದ ವಲಯಗಳಲ್ಲಿ ವಸತಿ ಮತ್ತು ಆಹಾರ ಸೇವಾ ಕ್ಷೇತ್ರ ಶೇ. 37.2 ಹಾಗೂ ಚಿಲ್ಲರೆ ವ್ಯಾಪಾರ (Retail Trade) ಶೇ. 30.8ರಷ್ಟು ಏರಿಕೆಯನ್ನು ದಾಖಲಿಸಿವೆ.
ಈ ಅಂಕಿಅಂಶಗಳು ಇ-ಸಂಖ್ಯಿಕಿ (e-Sankhyiki) ಪೋರ್ಟಲ್‌ನಲ್ಲೂ ಲಭ್ಯವಾಗಲಿವೆ ಎಂದು ಸಚಿವಾಲಯ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್, ಈ ಸೂಚ್ಯಂಕದ ಬಿಡುಗಡೆ ಭಾರತದ ಅಂಕಿಅಂಶ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಜಿಎಸ್‌ಟಿ (GST) ದಾಖಲೆಗಳಂತಹ ಆಡಳಿತಾತ್ಮಕ ಮಾಹಿತಿಯನ್ನು ಬಳಸಿಕೊಂಡೇ ಈ ಸೂಚ್ಯಂಕವನ್ನು ಅಭಿವೃದ್ಧಿಪಡಿಸಲಾಗಿದ್ದು, ಕೈಗಾರಿಕೆಗಳು ಅಥವಾ ಉದ್ಯಮಗಳ ಮೇಲೆ ಯಾವುದೇ ಹೆಚ್ಚುವರಿ ಮಾಹಿತಿಯ ಸಲ್ಲಿಕೆ ಹೊಣೆಗಾರಿಕೆಯನ್ನು ವಿಧಿಸಿಲ್ಲ ಎಂದು ಅವರು ತಿಳಿಸಿದರು.
ಅಲ್ಲದೆ, ISP ಒಂದು ಉತ್ಪಾದನಾ ಚಟುವಟಿಕೆಯ ಸೂಚ್ಯಂಕವಾಗಿದ್ದು, ಜಿಡಿಪಿ (GDP) ಲೆಕ್ಕಾಚಾರದಲ್ಲಿ ಬಳಸುವ ಒಟ್ಟು ಮೌಲ್ಯವರ್ಧನೆ (Gross Value Added – GVA)ಗೆ ಸಮಾನವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ವಿವಿಧ ವಲಯಗಳ ಅಭಿಪ್ರಾಯಗಳನ್ನು ಪಡೆದು ಈ ಸೂಚ್ಯಂಕವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲಾಗುವುದು ಎಂದರು.
ಇದೇ ವೇಳೆ, ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಮಾತನಾಡಿ, ಇದನ್ನು ಅಂತಿಮ ಅಥವಾ ಪರಿಪೂರ್ಣ ಸೂಚ್ಯಂಕವೆಂದು ಪರಿಗಣಿಸಬಾರದು; ಇದು ಪ್ರಯೋಗಾತ್ಮಕ ಸರಣಿ ಎಂದು ತಿಳಿಸಿದರು. ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೂಲಕ ಅದರ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಉದ್ದೇಶವಿದೆ ಎಂದರು.
ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಗಳು ಹಾಗೂ ವಸತಿ ಮಾಲೀಕತ್ವ ಸಂಬಂಧಿತ ಸೇವೆಗಳು ಸೇರಿದಂತೆ ಇನ್ನಷ್ಟು ವಲಯಗಳನ್ನು ಸೇರಿಸುವ ಮೂಲಕ ಈ ಸೂಚ್ಯಂಕದ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಆಗ ದೇಶದ ಔಪಚಾರಿಕ ಸೇವಾ ವಲಯದ 85ರಿಂದ 90 ಶೇಕಡಾ ಪಾಲನ್ನು ಈ ಸೂಚ್ಯಂಕ ಒಳಗೊಂಡಿರಲಿದೆ ಎಂದು ಅವರು ಹೇಳಿದರು.


