ಇಂದಿನಿಂದ ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ: ರಫ್ತಿಗೆ ಹೊಸ ಅವಕಾಶಗಳ ಬಾಗಿಲು

2 Min Read
2 Min Read

ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (Comprehensive Economic and Trade Agreement – CETA) ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದ (Double Contribution Convention – DCC) ಕೂಡ ಜಾರಿಗೆ ಬಂದಿದ್ದು, ಯುಕೆಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ವೃತ್ತಿಪರರಿಗೆ ಮಹತ್ವದ ಅನುಕೂಲಗಳನ್ನು ಒದಗಿಸಲಿದೆ.

ಈ ಐತಿಹಾಸಿಕ ಒಪ್ಪಂದದ ಮೂಲಕ ಯುಕೆ ಮಾರುಕಟ್ಟೆಯ ಶೇ.99ರಷ್ಟು ಸುಂಕ ಶ್ರೇಣಿಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಸಂಪೂರ್ಣ ಸುಂಕ ರಹಿತ ಪ್ರವೇಶ ದೊರೆಯಲಿದೆ. ಇದು ಭಾರತ ಮತ್ತು ಯುಕೆ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಉಭಯ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿದೆ.

ನವದೆಹಲಿದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗ್ರವಾಲ್, ಭಾರತ–ಯುಕೆ CETA ಭಾರತದ ವಾಣಿಜ್ಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳ ನಡುವೆ ಭವಿಷ್ಯಮುಖಿ ಆರ್ಥಿಕ ಸಹಭಾಗಿತ್ವಕ್ಕೆ ಇದು ನಾಂದಿ ಹಾಡಲಿದೆ ಎಂದು ಹೇಳಿದರು.

ಈ ಒಪ್ಪಂದವು ಭಾರತದ ಅತ್ಯಂತ ಸಮಗ್ರ ವ್ಯಾಪಾರ ಒಪ್ಪಂದಗಳಲ್ಲಿ ಒಂದಾಗಿದ್ದು, ವಿವಿಧ ಕೈಗಾರಿಕಾ ವಲಯಗಳನ್ನು ಒಳಗೊಂಡಿದೆ. ಜೊತೆಗೆ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆ ಸಂಬಂಧಗಳಿಗೆ ಹೊಸ ವೇಗ ನೀಡಲಿದೆ ಎಂದು ಅವರು ತಿಳಿಸಿದರು.

ಡಬಲ್ ಕಂಟ್ರಿಬ್ಯೂಷನ್ ಕನ್ವೆನ್ಷನ್ (DCC) ಅಡಿಯಲ್ಲಿ ಯುಕೆಗೆ ತಾತ್ಕಾಲಿಕ ನಿಯೋಜನೆಯ ಮೇಲೆ ತೆರಳುವ ಅರ್ಹ ಭಾರತೀಯ ಉದ್ಯೋಗಿಗಳು ಮತ್ತು ಅವರ ಉದ್ಯೋಗದಾತರು, ನಿಗದಿತ ಅವಧಿಯವರೆಗೆ ಅಲ್ಲಿನ ಸಾಮಾಜಿಕ ಭದ್ರತಾ ಕೊಡುಗೆ (Social Security Contribution) ಪಾವತಿಯಿಂದ ವಿನಾಯಿತಿ ಪಡೆಯಲಿದ್ದಾರೆ. ಇದರಿಂದ ಭಾರತೀಯ ವೃತ್ತಿಪರರ ಸ್ಪರ್ಧಾತ್ಮಕತೆ ಹೆಚ್ಚುವ ನಿರೀಕ್ಷೆಯಿದೆ.

ಈ ಒಪ್ಪಂದದ ಜಾರಿಗೆ ಭಾರತದ ರಫ್ತು ವಲಯಕ್ಕೆ ಮಹತ್ವದ ಉತ್ತೇಜನ ದೊರೆಯಲಿದೆ. ಸಂಸ್ಕರಿತ ಆಹಾರ ಉತ್ಪನ್ನಗಳ ಮೇಲಿನ ಶೇ.70ರವರೆಗಿನ, ಸಮುದ್ರ ಆಹಾರ ಉತ್ಪನ್ನಗಳ ಮೇಲಿನ ಶೇ.21ಕ್ಕಿಂತ ಹೆಚ್ಚಿನ, ಎಂಜಿನಿಯರಿಂಗ್ ವಸ್ತುಗಳು ಹಾಗೂ ವಾಹನ ಬಿಡಿಭಾಗಗಳ ಮೇಲಿನ ಶೇ.18ರವರೆಗಿನ, ಚರ್ಮ ಮತ್ತು ಪಾದರಕ್ಷೆಗಳ ಮೇಲಿನ ಶೇ.16ರವರೆಗಿನ ಹಾಗೂ ಜವಳಿ ಮತ್ತು ಉಡುಪುಗಳ ಮೇಲಿನ ಶೇ.12ರವರೆಗಿನ ಯುಕೆ ಸುಂಕಗಳು ಸಂಪೂರ್ಣವಾಗಿ ರದ್ದಾಗಲಿವೆ.

ಇದರಿಂದ ಭಾರತೀಯ ಉತ್ಪನ್ನಗಳ ಸ್ಪರ್ಧಾತ್ಮಕತೆ ಯುಕೆ ಮಾರುಕಟ್ಟೆಯಲ್ಲಿ ಹೆಚ್ಚಲಿದ್ದು, ರೈತರು, ಮೀನುಗಾರರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಉತ್ಪಾದನಾ ವಲಯ ಹಾಗೂ ರಫ್ತುದಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ ಜಾಗತಿಕ ಮೌಲ್ಯ ಸರಪಳಿಯಲ್ಲಿ (Global Value Chain) ಭಾರತದ ಪಾಲ್ಗೊಳ್ಳುವಿಕೆ ಮತ್ತಷ್ಟು ಬಲಗೊಳ್ಳಲಿದೆ.

ಅದೇ ವೇಳೆ, ಡೈರಿ ಉತ್ಪನ್ನಗಳು, ಧಾನ್ಯಗಳು, ಸಿರಿಧಾನ್ಯಗಳು, ಅಡುಗೆ ಎಣ್ಣೆ, ಎಣ್ಣೆಬೀಜಗಳು, ಸೇಬು ಸೇರಿದಂತೆ ಕೆಲವು ತರಕಾರಿ ಉತ್ಪನ್ನಗಳಂತಹ ಸೂಕ್ಷ್ಮ ವಲಯಗಳಿಗೆ ಭಾರತ ರಕ್ಷಣೆ ಒದಗಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Share This Article