ನವದೆಹಲಿ: ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಂದಿನಿಂದ ಮಂಗೋಲಿಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳಿಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿಯಂತೆ, ಪ್ರವಾಸದ ಮೊದಲ ಹಂತದಲ್ಲಿ ಜೈಶಂಕರ್ ಅವರು ಮಂಗೋಲಿಯಾ ಭೇಟಿ ನೀಡಿ ಅಲ್ಲಿನ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಮಂಗೋಲಿಯಾದ ವಿದೇಶಾಂಗ ಸಚಿವೆ ಬಿ. ಬಟ್ಸೆಟ್ಸೆಗ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಹಾಗೂ ಪರಸ್ಪರ ಸಹಕಾರದ ಕುರಿತು ಚರ್ಚೆ ನಡೆಸಲಿದ್ದಾರೆ.
ಜೂನ್ 24 ಮತ್ತು 25ರಂದು ಜೈಶಂಕರ್ ಅವರು ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ವಿದೇಶಾಂಗ ಸಚಿವ ಚೋ ಹ್ಯುನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಭಾರತ-ದಕ್ಷಿಣ ಕೊರಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಇದೇ ವೇಳೆ, ಜೂನ್ 25ರಂದು ಜೆಜು ದ್ವೀಪದಲ್ಲಿ ನಡೆಯಲಿರುವ ‘ಜೆಜು ಫೋರಂ ಫಾರ್ ಪೀಸ್ ಅಂಡ್ ಪ್ರಾಸ್ಪೆರಿಟಿ’ ಕಾರ್ಯಕ್ರಮದಲ್ಲಿ ಡಾ. ಜೈಶಂಕರ್ ಮುಖ್ಯ ಭಾಷಣ ಮಾಡಲಿದ್ದಾರೆ. ಈ ವೇದಿಕೆಯಲ್ಲಿ ಪ್ರಾದೇಶಿಕ ಶಾಂತಿ, ಸಹಕಾರ ಮತ್ತು ಜಾಗತಿಕ ಸವಾಲುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.


