ಗುವಾಹಟಿ: ಬ್ರಿಕ್ಸ್ (BRICS) ರಾಷ್ಟ್ರಗಳ ಮಾದಕವಸ್ತು ನಿಯಂತ್ರಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಇಂದು ಅಸ್ಸಾಂನ ಗುವಾಹಟಿಯಲ್ಲಿ ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯನ್ನು ಕೇಂದ್ರ ಗೃಹ ಸಚಿವಾಲಯದ ಅಧೀನದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆಯೋಜಿಸಿದೆ.
ಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಮಾದಕವಸ್ತು ನಿಯಂತ್ರಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕ ವ್ಯಸನ ನಿಯಂತ್ರಣದಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಪ್ರಮುಖ ಉದ್ದೇಶವಾಗಿದೆ.
ಸಭೆಯಲ್ಲಿ ಸಿಂಥೆಟಿಕ್ ಡ್ರಗ್ಸ್, ಅವುಗಳ ತಯಾರಿಕೆಗೆ ಬಳಸುವ ಪ್ರಿಕರ್ಸರ್ ರಾಸಾಯನಿಕಗಳ ದುರ್ಬಳಕೆ, ಗುಪ್ತಚರ ಮಾಹಿತಿ ವಿನಿಮಯ, ಜಂಟಿ ಕಾರ್ಯಾಚರಣೆಗಳ ಸಮನ್ವಯ ಹಾಗೂ ಸಂಸ್ಥೆಗಳ ಸಾಮರ್ಥ್ಯ ವೃದ್ಧಿ ಕುರಿತು ಚರ್ಚೆ ನಡೆಯಲಿದೆ.
ಇದರ ಜೊತೆಗೆ, ಹೊಸ ಮಾದರಿಯ ಮಾನಸಿಕ ಪ್ರಭಾವ ಬೀರುವ ಮಾದಕ ವಸ್ತುಗಳು (New Psychoactive Substances), ಡಾರ್ಕ್‌ನೆಟ್ ಮೂಲಕ ನಡೆಯುವ ಡ್ರಗ್ಸ್ ಕಳ್ಳಸಾಗಣೆ, ಕ್ರಿಪ್ಟೋಕರೆನ್ಸಿ ಮೂಲಕ ನಡೆಯುವ ಅಕ್ರಮ ಹಣಕಾಸು ವ್ಯವಹಾರಗಳು ಹಾಗೂ ಪ್ರಿಕರ್ಸರ್ ರಾಸಾಯನಿಕಗಳ ಅಕ್ರಮ ಬಳಕೆ ಸೇರಿದಂತೆ ಹೊಸ ಸವಾಲುಗಳ ಬಗ್ಗೆ ಸದಸ್ಯ ರಾಷ್ಟ್ರಗಳು ಚರ್ಚಿಸಲಿವೆ.
ಸಭೆಯಲ್ಲಿ ಭಾರತವು ‘ವಿಷನ್ ಡಾಕ್ಯುಮೆಂಟ್ ಆನ್ ನಾರ್ಕೋಟಿಕ್ಸ್ ಕಂಟ್ರೋಲ್ 2026–2029’ ಸೇರಿದಂತೆ ಮಾದಕವಸ್ತು ನಿಯಂತ್ರಣ ಕ್ಷೇತ್ರದಲ್ಲಿ ಕೈಗೊಂಡಿರುವ ಪ್ರಮುಖ ಕ್ರಮಗಳನ್ನು ಸದಸ್ಯ ರಾಷ್ಟ್ರಗಳ ಮುಂದೆ ಪ್ರಸ್ತುತಪಡಿಸಲಿದೆ.
ಮಾದಕವಸ್ತು ಸಂಬಂಧಿತ ಹೊಸ ಅಪಾಯಗಳನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ಸಮನ್ವಯ ಹೆಚ್ಚಿಸುವ ಹಾಗೂ ಸಹಕಾರವನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ.


