ನವದೆಹಲಿ: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರ ಹಾಗೂ ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದಕ್ಕಾಗಿ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಕೃತಜ್ಞತೆ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಇರಾನ್ ರಾಯಭಾರ ಕಚೇರಿ, ಭಾರತ ಸರ್ಕಾರ ಮತ್ತು ಭಾರತೀಯ ಜನತೆ ತೋರಿದ ಗೌರವವು ಉಭಯ ರಾಷ್ಟ್ರಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ತಿಳಿಸಿದೆ.
ರಾಯಭಾರ ಕಚೇರಿಯ ಪ್ರಕಾರ, ಅಂತ್ಯಕ್ರಿಯೆಯಲ್ಲಿ ಭಾರತದ ರಾಜಕೀಯ ನಾಯಕರು, ಸಂಸದರು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳು ಪಾಲ್ಗೊಂಡಿರುವುದು ಭಾರತ-ಇರಾನ್ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ಇರಾನ್, ಭಾರತವು ತೋರಿದ ಗೌರವ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದು, ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಗಟ್ಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.


