ಚಳಿಗಾಲದ ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಶಾಶ್ವತ ಮಾಸ್ಟರ್ ಪ್ಲಾನ್ ಜಾರಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದಲ್ಲಿ ಹೆಚ್ಚಾಗುವ ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಶಾಶ್ವತ ‘ವಿಂಟರ್ ಪಲ್ಯೂಷನ್ ಮಾಸ್ಟರ್ ಪ್ಲಾನ್’ ಅನ್ನು ಪ್ರಕಟಿಸಿದೆ. ಈ ಯೋಜನೆ ಪ್ರತಿ ವರ್ಷ ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ಜಾರಿಯಲ್ಲಿರಲಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಇದುವರೆಗೆ ಪ್ರತ್ಯೇಕವಾಗಿ ಜಾರಿಗೊಳಿಸಲಾಗುತ್ತಿದ್ದ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಒಂದೇ ನಿಯಮಾವಳಿಯಡಿ ತರಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಪ್ರತಿ ಚಳಿಗಾಲದಲ್ಲಿ ಹೊಸ ಆದೇಶ ಹೊರಡಿಸುವ ಅಗತ್ಯವಿಲ್ಲದೆ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಲು ಸಾಧ್ಯವಾಗಲಿದೆ.
ಹೊಸ ನಿಯಮಾವಳಿಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಪರಿಷ್ಕೃತ GRAP ಮಾರ್ಗಸೂಚಿಗಳು ಹಾಗೂ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಒಳಗೊಂಡಿದೆ.
ಪ್ರಮುಖ ನಿಯಮಗಳು:
- ಮಾನ್ಯ Pollution Under Control (PUC) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ವರ್ಷಪೂರ್ತಿ ದೆಹಲಿಯ ಪೆಟ್ರೋಲ್ ಬಂಕ್, ಸಿಎನ್‌ಜಿ ಹಾಗೂ ಎಲ್‌ಪಿಜಿ ಕೇಂದ್ರಗಳಲ್ಲಿ ಇಂಧನ ಪೂರೈಕೆ ಮಾಡಲಾಗುವುದಿಲ್ಲ.
- ನವೆಂಬರ್ 1ರಿಂದ ಜನವರಿ 31ರವರೆಗೆ BS-VI ಮಾನದಂಡಕ್ಕಿಂತ ಕೆಳಮಟ್ಟದ, ದೆಹಲಿ ಹೊರಗಿನ ನೋಂದಣಿ ಹೊಂದಿರುವ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಸಿಎನ್‌ಜಿ, ಎಲೆಕ್ಟ್ರಿಕ್ ವಾಹನಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಹಾಗೂ ಅಗತ್ಯ ಸೇವೆಗಳ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
- ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ಅಧಿಕೃತ ಪಾರ್ಕಿಂಗ್ ಕೇಂದ್ರಗಳ ಪಾರ್ಕಿಂಗ್ ಶುಲ್ಕವನ್ನು ಎರಡರಷ್ಟು ಹೆಚ್ಚಿಸಲಾಗುತ್ತದೆ.
- ನವೆಂಬರ್ 1ರಿಂದ ಜನವರಿ 31ರವರೆಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಶೇ.50 ಸಿಬ್ಬಂದಿಗೆ ಮನೆಯಿಂದಲೇ ಕೆಲಸ (Work From Home) ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಕಚೇರಿ ವೇಳೆಯನ್ನು ಹಂತ ಹಂತವಾಗಿ ನಿಗದಿಪಡಿಸಲಾಗುತ್ತದೆ.
- ಇದೇ ಅವಧಿಯಲ್ಲಿ ಕಟ್ಟಡಗಳ ನೆಲಸಮಗೊಳಿಸುವ (Demolition) ಕೆಲಸ ಹಾಗೂ ಧೂಳು ಉಂಟುಮಾಡುವ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಇರಲಿದೆ. ಆದರೆ ಅಗತ್ಯ ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ.
- ದೊಡ್ಡ ವಾಣಿಜ್ಯ ಕಟ್ಟಡಗಳು ಹಾಗೂ ಪ್ರಮುಖ ನಿರ್ಮಾಣ ಸ್ಥಳಗಳಲ್ಲಿ ಆಂಟಿ-ಸ್ಮಾಗ್ ಗನ್ ಅಥವಾ ಮಿಸ್ಟ್ ವ್ಯವಸ್ಥೆ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
- ತ್ಯಾಜ್ಯವನ್ನು ಬಹಿರಂಗವಾಗಿ ಸುಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಂಸ್ಥೆಗಳು ಹಾಗೂ ನಿವಾಸಿಗಳ ಕಲ್ಯಾಣ ಸಂಘಗಳನ್ನೂ (RWA) ಹೊಣೆಗಾರರನ್ನಾಗಿ ಮಾಡಲಾಗಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, “ದೆಹಲಿ ಸ್ವಚ್ಛ ಮತ್ತು ಆರೋಗ್ಯಕರ ನಗರವಾಗಬೇಕಾದರೆ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅಗತ್ಯ. ಈ ಶಾಶ್ವತ ಯೋಜನೆಯಿಂದ ಮಾಲಿನ್ಯ ನಿಯಂತ್ರಣ ಕ್ರಮಗಳು ಇನ್ನಷ್ಟು ಪರಿಣಾಮಕಾರಿಯಾಗಲಿವೆ” ಎಂದು ತಿಳಿಸಿದ್ದಾರೆ.


