ಕೊನೆಯ ಕ್ಷಣದಲ್ಲಿ ಜಪಾನ್ ಹೋರಾಟ: ನೆದರ್ಲೆಂಡ್ಸ್ ವಿರುದ್ಧ 2-2 ಸಮಬಲ

2 Min Read
2 Min Read

ಹ್ಯೂಸ್ಟನ್: ಫಿಫಾ ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲೇ ಜರ್ಮನಿ ತಂಡ ಭರ್ಜರಿ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಕುರಸಾವೊ ತಂಡವನ್ನು 7-1 ಗೋಲುಗಳಿಂದ ಮಣಿಸಿದೆ.

ಪಂದ್ಯದ ಆರನೇ ನಿಮಿಷದಲ್ಲೇ ಫ್ಲೋರಿಯನ್ ವಿರ್ಟ್ಜ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಫೆಲಿಕ್ಸ್ ನೆಮ್ಚಾ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜರ್ಮನಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

ಆದರೆ 21ನೇ ನಿಮಿಷದಲ್ಲಿ ಲಿವಾನೊ ಕೊಮೆನೆನ್ಸಿಯಾ ಗೋಲು ದಾಖಲಿಸುವ ಮೂಲಕ ಕುರಸಾವೊಗೆ ಸಮಬಲ ತಂದುಕೊಟ್ಟರು. ಇದು ವಿಶ್ವಕಪ್ ಇತಿಹಾಸದಲ್ಲಿ ಕುರಸಾವೊ ತಂಡ ದಾಖಲಿಸಿದ ಮೊದಲ ಗೋಲಾಗಿದ್ದು ವಿಶೇಷವಾಗಿತ್ತು. ಆದರೆ ನಂತರ ಜರ್ಮನಿ ಸಂಪೂರ್ಣ ಮೇಲುಗೈ ಸಾಧಿಸಿ ಸತತ ಗೋಲುಗಳನ್ನು ಬಾರಿಸಿ ಭರ್ಜರಿ ಜಯ ದಾಖಲಿಸಿತು.

ಇನ್ನೊಂದು ‘ಎಫ್’ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ನೆದರ್ಲೆಂಡ್ಸ್ ತಂಡಗಳು 2-2 ಗೋಲುಗಳ ರೋಚಕ ಡ್ರಾದಲ್ಲಿ ತೃಪ್ತಿಪಟ್ಟವು. ಟೆಕ್ಸಾಸ್‌ನ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲುರಹಿತವಾಗಿದ್ದವು.

ಎರಡನೇಾರ್ಧದಲ್ಲಿ ವರ್ಜಿಲ್ ವ್ಯಾನ್ ಡೈಕ್ ಹೆಡರ್ ಮೂಲಕ ನೆದರ್ಲೆಂಡ್ಸ್‌ಗೆ ಮುನ್ನಡೆ ತಂದುಕೊಟ್ಟರು. ಆದರೆ ಕೆಲವೇ ಕ್ಷಣಗಳಲ್ಲಿ ಕೈಟೊ ನಕಮುರಾ ಗೋಲು ಬಾರಿಸಿ ಜಪಾನ್‌ಗೆ ಸಮಬಲ ಒದಗಿಸಿದರು.

ನಂತರ ಕ್ರೈಸೆನ್ಸಿಯೋ ಸಮರ್‌ವಿಲ್ ಅವರ ಅದ್ಭುತ ಕರ್‌ಲಿಂಗ್ ಶಾಟ್ ನೆದರ್ಲೆಂಡ್ಸ್‌ಗೆ ಮತ್ತೆ ಮುನ್ನಡೆ ನೀಡಿತು. ಗೆಲುವಿನತ್ತ ಸಾಗುತ್ತಿದ್ದ ಡಚ್ ತಂಡಕ್ಕೆ ಅಂತಿಮ ಕ್ಷಣದಲ್ಲಿ ಜಪಾನ್ ಆಘಾತ ನೀಡಿತು. ಕೋಕಿ ಒಗಾವಾ ಅವರ ಹೆಡರ್ ಚೆಂಡು ಡೈಚಿ ಕಾಮಡಾ ಅವರ ಮೂಲಕ ದಿಕ್ಕು ಬದಲಿಸಿ ಗೋಲುಪೋಸ್ಟ್ ಸೇರಿದ್ದರಿಂದ ಪಂದ್ಯ 2-2 ಸಮಬಲದಲ್ಲಿ ಅಂತ್ಯಗೊಂಡಿತು.

ಇಂದು ನಡೆಯಲಿರುವ ಪಂದ್ಯಗಳಲ್ಲಿ ‘ಎಫ್’ ಗುಂಪಿನಲ್ಲಿ ಟುನೀಶಿಯಾ ಮತ್ತು ಸ್ವೀಡನ್ ತಂಡಗಳು ಮೆಕ್ಸಿಕೋದ ಮಾಂಟೆರೇ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ಬೆಳಗ್ಗೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಮತ್ತೊಂದು ‘ಎಚ್’ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡ ಅಮೆರಿಕದ ಅಟ್ಲಾಂಟಾ ಕ್ರೀಡಾಂಗಣದಲ್ಲಿ ಕೇಪ್ ವರ್ಡೆ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಆರಂಭವಾಗಲಿದೆ.

Share This Article