ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಬಂದಿರುವ ದೇಣಿಗೆ ಹಾಗೂ ಕಾಣಿಕೆಗಳ ದುರ್ಬಳಕೆ ಆರೋಪಗಳ ಕುರಿತು ಎಫ್‌ಐಆರ್ ದಾಖಲಿಸಿ ನ್ಯಾಯಾಲಯದ ಮೇಲ್ವಿಚಾರಣೆಯಡಿ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಉದ್ದೇಶಿಸಿ ಈ ಮನವಿಯನ್ನು ಅಡ್ವೊಕೇಟ್-ಆನ್-ರೆಕಾರ್ಡ್ ಅನೂಪ್ ಪ್ರಕಾಶ್ ಅವಸ್ಥಿ ಸಲ್ಲಿಸಿದ್ದಾರೆ. ಕೇಂದ್ರ ತನಿಖಾ ದಳ (ಸಿಬಿಐ) ಸೇರಿದಂತೆ ಉನ್ನತ ತನಿಖಾ ಸಂಸ್ಥೆಯಿಂದ ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ.
ಮನವಿಯಲ್ಲಿ, ಈ ವಿಷಯವು ಕೋಟ್ಯಂತರ ರಾಮಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ಸಂಬಂಧಿಸಿದ್ದು, ದೇವಸ್ಥಾನಕ್ಕೆ ಬಂದ ದೇಣಿಗೆ ಹಣದ ದುರ್ಬಳಕೆ, ಅಕ್ರಮ ವ್ಯವಹಾರ ಅಥವಾ ನಿಧಿ ನಾಪತ್ತೆಯಾದ ಕುರಿತು ಇತ್ತೀಚೆಗೆ ಬಂದಿರುವ ವರದಿಗಳು ದೇಶ-ವಿದೇಶಗಳ ಭಕ್ತರಲ್ಲಿ ಆತಂಕ ಮೂಡಿಸಿವೆ ಎಂದು ಉಲ್ಲೇಖಿಸಲಾಗಿದೆ.
ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರೂ, ಇದುವರೆಗೆ ಯಾವುದೇ ಅಧಿಕೃತ ಅಪರಾಧ ಪ್ರಕರಣ ದಾಖಲಿಸದಿರುವುದು ಹಾಗೂ ಎಫ್‌ಐಆರ್ ದಾಖಲಾಗದಿರುವುದು ತನಿಖೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಎಸ್‌ಐಟಿ ತನಿಖೆ ಮಾತ್ರ ಸಾಕಾಗುವುದಿಲ್ಲ ಎಂದು ಪ್ರತಿಪಾದಿಸಿರುವ ಅರ್ಜಿದಾರರು, ಸಂವಿಧಾನಾತ್ಮಕ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದರೆ ಮಾತ್ರ ಭಕ್ತರಲ್ಲಿ ವಿಶ್ವಾಸ ಮೂಡಲಿದೆ ಎಂದು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಕೋರಿರುವ ಮನವಿಯಲ್ಲಿ, ದೇವಸ್ಥಾನಕ್ಕೆ ಬಂದಿರುವ ದೇಣಿಗೆ ನಿಧಿಯ ಸಂರಕ್ಷಣೆಗಾಗಿ ವಿಶೇಷ ವ್ಯವಸ್ಥೆ ರೂಪಿಸುವುದು, ದೇಣಿಗೆ ಸಂಗ್ರಹ, ಲೆಕ್ಕಪತ್ರ ನಿರ್ವಹಣೆ, ನಿಧಿಯ ಭದ್ರತೆ, ಆಡಳಿತ ಹಾಗೂ ವೆಚ್ಚದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಆಗ್ರಹಿಸಲಾಗಿದೆ.
ಈ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯ ನಿರ್ದೇಶನ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ಭಕ್ತರು ಹಾಗೂ ಸಾರ್ವಜನಿಕ ವಲಯದ ಗಮನ ಇದೀಗ ಈ ಬೆಳವಣಿಗೆಯತ್ತ ನೆಟ್ಟಿದೆ.


