ಬೆಂಗಳೂರು: ಚಂದ್ರನ ಮೇಲಿನ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿ ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸಬಲ್ಲ ಸುಧಾರಿತ ಲ್ಯಾಂಡರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಅಣುಶಕ್ತಿ ಇಲಾಖೆ (DAE) ಕೈಜೋಡಿಸಿವೆ.
ಬೆಂಗಳೂರಿನಲ್ಲಿ ನಡೆದ ಸಿಎಸ್‌ಐಆರ್-ರೈಸ್ (CSIR-RISE) ಸಮಾವೇಶದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, ಚಂದ್ರಯಾನ-3 ಮಿಷನ್‌ನ ‘ವಿಕ್ರಮ್’ ಲ್ಯಾಂಡರ್ ಸೌರಶಕ್ತಿಯ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರಿಂದ ಚಂದ್ರನ ಮೇಲೆ ಕೇವಲ 14 ದಿನಗಳ ಕಾಲ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಚಂದ್ರನ ರಾತ್ರಿ ವೇಳೆ ಉಂಟಾಗುವ ತೀವ್ರ ಚಳಿಯನ್ನು ತಡೆದುಕೊಳ್ಳಲು ಕೃತಕ ಹೀಟರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಸ್ರೋ ಮತ್ತು ಅಣುಶಕ್ತಿ ಇಲಾಖೆ ಸಂಯುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿದ ಲ್ಯಾಂಡರ್ ಸುಮಾರು 200 ದಿನಗಳವರೆಗೆ ಚಂದ್ರನ ಮೇಲೆಯೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ಭವಿಷ್ಯದ ದೀರ್ಘಾವಧಿಯ ಚಂದ್ರ ಅನ್ವೇಷಣಾ ಮಿಷನ್‌ಗಳಿಗೆ ಮಹತ್ತರ ಉತ್ತೇಜನ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರನ ಮೇಲೆ ಹಗಲು ಮತ್ತು ರಾತ್ರಿ ತಲಾ ಸುಮಾರು 14 ಭೂಮಿಯ ದಿನಗಳಷ್ಟು ಕಾಲ ಇರುತ್ತವೆ. ಹಗಲಿನಲ್ಲಿ ಉಷ್ಣಾಂಶ 121 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದರೆ, ರಾತ್ರಿ ವೇಳೆ ಅದು ಮೈನಸ್ 129 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುತ್ತದೆ. ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಕೃತಕ ತಾಪನ ವ್ಯವಸ್ಥೆ ಅತ್ಯಗತ್ಯ ಎಂದು ನಾರಾಯಣನ್ ವಿವರಿಸಿದರು.
ಸಂಶೋಧನಾ ಸಹಭಾಗಿತ್ವಗಳ ಕುರಿತು ಮಾತನಾಡಿದ ಅವರು, ಇಸ್ರೋ ಮತ್ತು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (CSIR) ನಡುವೆ 40 ತಾಂತ್ರಿಕ ಸಹಕಾರ ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 17 ಯೋಜನೆಗಳಿಗೆ ಮೊದಲ ಹಂತದಲ್ಲೇ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ರೀತಿ, ಗಗನಯಾನ ಮಾನವ ಬಾಹ್ಯಾಕಾಶ ಯಾನದ ಮಿಷನ್‌ಗಾಗಿ ಬಾಹ್ಯಾಕಾಶ ಔಷಧಗಳ ಅಭಿವೃದ್ಧಿ ಸಂಬಂಧ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಸಹ ಇಸ್ರೋ ಸಹಭಾಗಿತ್ವ ಬೆಳೆಸಿದೆ.
ಅಲ್ಲದೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಡೆದ ಆಕ್ಸಿಯಂ-4 ಮಿಷನ್ ವೇಳೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ನಡೆಸಿದ ಮೈಕ್ರೋಗ್ರಾವಿಟಿ ಪ್ರಯೋಗಗಳಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೂ ಇಸ್ರೋ ಸಂಯುಕ್ತವಾಗಿ ಕಾರ್ಯನಿರ್ವಹಿಸಿದೆ ಎಂದು ಅವರು ಮಾಹಿತಿ ನೀಡಿದರು.
ದೀರ್ಘಾವಧಿಯ ಬಾಹ್ಯಾಕಾಶ ಮತ್ತು ಚಂದ್ರ ಸಂಶೋಧನೆಗೆ ಭಾರತ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಹಭಾಗಿತ್ವಗಳು ಮಹತ್ವದ ಮೈಲುಗಲ್ಲಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


