‘ಅಮೆರಿಕಾ ಅಮೆರಿಕಾ 2’ ಘೋಷಣೆ; ಹೊಸ ಕಥೆಯೊಂದಿಗೆ ಮರಳಿದ ನಾಗತಿಹಳ್ಳಿ ಚಂದ್ರಶೇಖರ್

1 Min Read
1 Min Read

30 ವರ್ಷಗಳ ಬಳಿಕ ‘ಅಮೆರಿಕಾ ಅಮೆರಿಕಾ’ ಹೆಸರಿನೊಂದಿಗೆ ನಾಗತಿಹಳ್ಳಿ ಚಂದ್ರಶೇಖರ್ ಕಂಬ್ಯಾಕ್

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ ‘ಅಮೆರಿಕಾ ಅಮೆರಿಕಾ’ ಬಿಡುಗಡೆಯಾಗಿ ಸುಮಾರು 30 ವರ್ಷಗಳಾದ ಬಳಿಕ, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅದೇ ಶೀರ್ಷಿಕೆಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆದರೆ, ‘ಅಮೆರಿಕಾ ಅಮೆರಿಕಾ 2’ ಮೊದಲ ಚಿತ್ರದ ಮುಂದುವರಿದ ಭಾಗವಲ್ಲ; ಇದು ಸಂಪೂರ್ಣ ಹೊಸ ಕಥೆಯನ್ನು ಹೊಂದಿರುವ ಸ್ವತಂತ್ರ ಸಿನಿಮಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಹನಾ ವಿಜಯಕುಮಾರ್ ಅವರ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಮತ್ತು ಪೃಥ್ವಿ ಅಂಬಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಯಿತು.

ಈ ವೇಳೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ಪ್ರತಿಯೊಂದು ಹೊಸ ಕಥೆಯೂ ಯಾವುದೋ ಹಳೆಯ ಕಥೆಯಿಂದಲೇ ಸ್ಫೂರ್ತಿ ಪಡೆಯುತ್ತದೆ. ‘ಅಮೆರಿಕಾ ಅಮೆರಿಕಾ 2’ ಮೊದಲ ಚಿತ್ರದ ಹೆಸರನ್ನು ಬಳಸಿಕೊಂಡಿದ್ದರೂ, ಕಥೆ, ಪಾತ್ರಗಳು, ಭಾವನೆಗಳು ಹಾಗೂ ಪ್ರಯಾಣ ಸಂಪೂರ್ಣ ಹೊಸದು. ಹೀಗಾಗಿ ಇದು ಮೊದಲ ಚಿತ್ರದ ಮುಂದುವರಿದ ಭಾಗವಲ್ಲ ಎಂದು ತಿಳಿಸಿದರು.

ಚಿತ್ರವು ಮಹಿಳಾ ಕೇಂದ್ರಿತ ಕಥಾಹಂದರವನ್ನು ಹೊಂದಿದ್ದು, ನಟಿ ಶಾನ್ವಿ ಶ್ರೀವಾಸ್ತವ ಅವರ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರ್ದೇಶಕರು ಹೇಳಿದರು. ಜೊತೆಗೆ ನಿರೂಪ್ ಭಂಡಾರಿ ಹಾಗೂ ಪೃಥ್ವಿ ಅಂಬಾರ್ ಅವರ ಅಭಿನಯವನ್ನೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಮನೋ ಮೂರ್ತಿ ಸಂಗೀತ ಸಂಯೋಜಿಸಿರುವ ನಾಲ್ಕು ಸುಮಧುರ ಗೀತೆಗಳು ಚಿತ್ರದಲ್ಲಿದ್ದು, ಹಿನ್ನೆಲೆ ಸಂಗೀತವನ್ನು ನಕುಲ್ ಅಭ್ಯಂಕರ್ ನೀಡಿದ್ದಾರೆ. ಅಮೆರಿಕದ ಸುಂದರ ತಾಣಗಳನ್ನು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಸೆರೆಹಿಡಿದಿದ್ದು, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನದ ಜೊತೆಗೆ ಡ್ರೋನ್ ದೃಶ್ಯಗಳು ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿವೆ.

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

Share This Article