ಗುಟ್ಟಾಗಿಯೇ ಶೂಟಿಂಗ್ ಶುರು ಮಾಡಿದ ರಾಜ್ ಬಿ. ಶೆಟ್ಟಿ: ಹೊಸ ಥ್ರಿಲ್ಲರ್‌ಗೆ 30 ದಿನಗಳ ಚಿತ್ರೀಕರಣ ಪೂರ್ಣ!

2 Min Read
2 Min Read

ಮಂಗಳೂರು: ನಟ, ನಿರ್ದೇಶಕ ಹಾಗೂ ಚಿತ್ರಕಥೆಗಾರ ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ. ಯಾವುದೇ ಅದ್ಧೂರಿ ಘೋಷಣೆ ಅಥವಾ ಪ್ರಚಾರವಿಲ್ಲದೆ ತಮ್ಮ ಹೊಸ ನಿರ್ದೇಶನದ ಸಿನಿಮಾದ ಚಿತ್ರೀಕರಣವನ್ನು ಅವರು ಆರಂಭಿಸಿದ್ದು, ಸದ್ಯ ಮಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ 30ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ ಎನ್ನಲಾಗಿದೆ.

ಚಿತ್ರದ ಶೀರ್ಷಿಕೆ ಹಾಗೂ ತಾರಾಗಣದ ವಿವರಗಳನ್ನು ಚಿತ್ರತಂಡ ಸದ್ಯ ಗೌಪ್ಯವಾಗಿಟ್ಟಿದೆ. ಮೂಲಗಳ ಪ್ರಕಾರ, ಇದು ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ಕರಾವಳಿ ಕರ್ನಾಟಕದ ವಿಶಿಷ್ಟ ಹಿನ್ನೆಲೆಯನ್ನು ಕಥೆಗೆ ಬಳಸಿಕೊಳ್ಳಲಾಗಿದೆ.

‘ಒಂದು ಮೊಟ್ಟೆಯ ಕಥೆ’ಯಿಂದ ಮತ್ತೆ ನಿರ್ದೇಶನದತ್ತ

ರಾಜ್ ಬಿ. ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕಥೆ’ 2017ರಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಬಳಿಕ 2021ರಲ್ಲಿ ಬಂದ ‘ಗರುಡ ಗಮನ ವೃಷಭ ವಾಹನ’ ಅವರ ನಿರ್ದೇಶನದ ಸಾಮರ್ಥ್ಯಕ್ಕೆ ಮತ್ತಷ್ಟು ಮೆಚ್ಚುಗೆ ತಂದುಕೊಟ್ಟಿತು.

2023ರಲ್ಲಿ ‘ಟೋಬಿ’ ಚಿತ್ರಕ್ಕೆ ಕಥೆ ಬರೆದಿದ್ದ ರಾಜ್ ಬಿ. ಶೆಟ್ಟಿ, ಅದೇ ವರ್ಷ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದರು. ಹೊಸ ಕಥೆಯೊಂದರ ಮೇಲೆ ಸಂಪೂರ್ಣ ಗಮನಹರಿಸಲು ತಾವು ಸಮಯ ಮೀಸಲಿಟ್ಟಿರುವುದಾಗಿ ಅವರು ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಹಲವು ತಿಂಗಳ ಕಾಲ ಕಥೆ ಮತ್ತು ಚಿತ್ರಕಥೆಯನ್ನು ರೂಪಿಸಿದ ಬಳಿಕ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಕರಾವಳಿಯ ನೆಲದ ಸೊಗಡಿನ ಥ್ರಿಲ್ಲರ್?

ಹೊಸ ಸಿನಿಮಾದ ಕಥೆ ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲೇ ಸಾಗಲಿದೆ ಎನ್ನಲಾಗಿದ್ದು, ರಾಜ್ ಬಿ. ಶೆಟ್ಟಿಯವರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸ್ಥಳೀಯ ಬದುಕು, ಪಾತ್ರಗಳ ನೈಜತೆ ಹಾಗೂ ಗಾಢ ನಿರೂಪಣೆಯ ಶೈಲಿಗೆ ಮತ್ತೊಮ್ಮೆ ಒತ್ತು ಸಿಗುವ ನಿರೀಕ್ಷೆಯಿದೆ.

ಸದ್ಯ ಮಂಗಳೂರಿನಲ್ಲಿ ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ಮುಗಿದ ಬಳಿಕ ಶೀರ್ಷಿಕೆ, ನಿರ್ಮಾಣ ಸಂಸ್ಥೆ, ತಾರಾಗಣ ಹಾಗೂ ತಾಂತ್ರಿಕ ತಂಡದ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಘೋಷಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ಹಲವು ಭಾಷೆಗಳ ಸಿನಿಮಾಗಳಲ್ಲಿ ರಾಜ್ ಬ್ಯುಸಿ

ನಿರ್ದೇಶನದ ಜೊತೆಗೆ ರಾಜ್ ಬಿ. ಶೆಟ್ಟಿ ಸದ್ಯ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟನಾಗಿಯೂ ಸಕ್ರಿಯರಾಗಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ಬಳಿಕ ‘45’, ‘ಲ್ಯಾಂಡ್‌ಲಾರ್ಡ್’, ‘ರಕ್ಕಸಪುರದೊಳ್’ ಹಾಗೂ ಇತ್ತೀಚೆಗೆ ‘ಕರಾವಳಿ’ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಅವರು ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ‘ಪಾಕೆಟ್ ನಾವೆಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಮತ್ತೊಂದು ತಮಿಳು ಸಿನಿಮಾ ‘ಸೆಯೋನ್’ ಕೂಡ ಅವರ ಮುಂದಿನ ಯೋಜನೆಗಳ ಪಟ್ಟಿಯಲ್ಲಿದೆ.

ನಟನೆಯ ಸಾಲು ಸಾಲು ಅವಕಾಶಗಳ ನಡುವೆಯೇ ರಾಜ್ ಬಿ. ಶೆಟ್ಟಿ ನಿರ್ದೇಶನದತ್ತ ಮರಳಿರುವುದು ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

Share This Article