ವಿನಯ್ ರಾಜ್‌ಕುಮಾರ್ ‘ಸಿಟಿ ಲೈಟ್ಸ್’ನಿಂದ ‘ಕಂದಮ್ಮ’ ಸಾಂಗ್ ರಿಲೀಸ್

1 Min Read
1 Min Read

ವಿನಯ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಚಿತ್ರದ ಮತ್ತೊಂದು ಹಾಡು ‘ಕಂದಮ್ಮ’ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಪ್ರೇಮಕಾವ್ಯದ ಸೊಗಡಿನ ಈ ಹಾಡು ಚಿತ್ರದ ಭಾವನಾತ್ಮಕ ಕಥಾಹಂದರಕ್ಕೆ ಮತ್ತಷ್ಟು ಜೀವ ತುಂಬುವಂತಿದೆ.

ಸಂಜಿತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಚಿತ್ರದ ನಾಯಕ ವಿನಯ್ ರಾಜ್‌ಕುಮಾರ್ ಹಾಗೂ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಮೋನಿಷಾ ಅವರ ನಡುವಿನ ಪ್ರೇಮಕಥೆಯನ್ನು ಹಾಡು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡುತ್ತದೆ.

ಈ ಹಿಂದೆ ಬಿಡುಗಡೆಯಾಗಿದ್ದ ‘ಬಾವ ಬಾವ’ ಹಾಡು ಉತ್ಸಾಹಭರಿತವಾಗಿದ್ದರೆ, ‘ಕಂದಮ್ಮ’ ಹಾಡು ಪ್ರೀತಿ, ಭಾವನೆ ಮತ್ತು ಆತ್ಮೀಯ ಕ್ಷಣಗಳಿಗೆ ಹೆಚ್ಚು ಒತ್ತು ನೀಡುತ್ತದೆ.

ಹೊಸ ಕಥಾಹಂದರದೊಂದಿಗೆ ವಿಜಯ್ ಕುಮಾರ್

‘ಸಲಗ’ ಮತ್ತು ‘ಭೀಮ’ ಚಿತ್ರಗಳ ಮೂಲಕ ಆಕ್ಷನ್ ಶೈಲಿಗೆ ಹೆಸರಾದ ನಿರ್ದೇಶಕ ವಿಜಯ್ ಕುಮಾರ್, ಈ ಬಾರಿ ಸಂಪೂರ್ಣ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಗ್ರಾಮದಿಂದ ಉತ್ತಮ ಬದುಕಿನ ಕನಸಿನೊಂದಿಗೆ ನಗರಕ್ಕೆ ಬರುವ ಯುವ ಜೋಡಿಯ ಕಥೆಯನ್ನು ಆಧರಿಸಿರುವ ‘ಸಿಟಿ ಲೈಟ್ಸ್’, ಕನಸುಗಳ ಹಿಂದೆ ಇರುವ ಹೋರಾಟ ಮತ್ತು ಬದುಕಿನ ಸವಾಲುಗಳನ್ನು ತೆರೆ ಮೇಲೆ ಅನಾವರಣಗೊಳಿಸಲಿದೆ.

ಟ್ರಾನ್ಸ್‌ಜೆಂಡರ್ ಪಾತ್ರಗಳಿಗೂ ಮಹತ್ವ

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಕುಮಾರ್, ಚಿತ್ರದಲ್ಲಿನ ಟ್ರಾನ್ಸ್‌ಜೆಂಡರ್ ಪಾತ್ರಗಳು ಕಥೆಗೆ ಪ್ರಮುಖ ಆಧಾರವಾಗಿದ್ದು, ಚಿತ್ರದ ಮುಖ್ಯ ಸಂದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುತ್ತವೆ ಎಂದು ಹೇಳಿದರು.

ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಹಾಗೂ ದೀಪು ಎಸ್. ಕುಮಾರ್ ಸಂಕಲನವಿದೆ. ದುನಿಯಾ ಟಾಕೀಸ್ ಮತ್ತು ಯಂತ್ರೋಧಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯ ನಿರ್ಮಿಸಿರುವ ಈ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.

Share This Article