ವಾಟ್ಸ್ಆ್ಯಪ್ ಹೊಸ ‘ಯೂಸರ್ನೇಮ್’ ವೈಶಿಷ್ಟ್ಯಕ್ಕೆ ಕೇಂದ್ರದ ನೋಟಿಸ್; 3 ದಿನಗಳಲ್ಲಿ ಸ್ಪಷ್ಟನೆ ನೀಡಲು ಮೆಟಾಗೆ ಸೂಚನೆ
ಭಾರತದಲ್ಲಿ ವಾಟ್ಸ್ಆ್ಯಪ್ (WhatsApp) ಹೊಸ ‘ಯೂಸರ್ನೇಮ್’ (Username) ವೈಶಿಷ್ಟ್ಯವನ್ನು ಹಂತ ಹಂತವಾಗಿ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೆಟಾ (Meta) ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಹೊಸ ವೈಶಿಷ್ಟ್ಯದ ಕುರಿತು ಮೂರು ದಿನಗಳೊಳಗೆ ವಿವರವಾದ ಸ್ಪಷ್ಟನೆ ನೀಡುವಂತೆ ಮೆಟಾಗೆ ಸೂಚಿಸಿದೆ.
ವಾಟ್ಸ್ಆ್ಯಪ್ ಜಾಗತಿಕ ಮಟ್ಟದಲ್ಲಿ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ವೈಶಿಷ್ಟ್ಯವನ್ನು ಹಂತ ಹಂತವಾಗಿ ಪರಿಚಯಿಸುತ್ತಿರುವುದಾಗಿ ಘೋಷಿಸಿರುವುದನ್ನು ಸಚಿವಾಲಯ ಗಮನಿಸಿದೆ. ಈ ವ್ಯವಸ್ಥೆ ಜಾರಿಯಾದ ಬಳಿಕ ಮೊದಲ ಬಾರಿಗೆ ಸಂಪರ್ಕಿಸುವ ಬಳಕೆದಾರರಿಗೆ ಮೊಬೈಲ್ ಸಂಖ್ಯೆ ಕಾಣಿಸದೇ, ಅದರ ಬದಲಿಗೆ ಬಳಕೆದಾರರು ಆಯ್ಕೆ ಮಾಡಿಕೊಂಡಿರುವ ಯೂಸರ್ನೇಮ್ ಮಾತ್ರ ಗೋಚರಿಸುವ ವ್ಯವಸ್ಥೆ ಇರಲಿದೆ.
ಆದರೆ, ಈ ಹೊಸ ವೈಶಿಷ್ಟ್ಯದಿಂದ ಆನ್ಲೈನ್ ವಂಚನೆ, ಫಿಶಿಂಗ್ ದಾಳಿ, ಡಿಜಿಟಲ್ ಅರೆಸ್ಟ್ ವಂಚನೆಗಳು ಹಾಗೂ ನಕಲಿ ಗುರುತಿನ (Impersonation) ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಜೊತೆಗೆ, ಇತರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ದುರ್ಬಳಕೆ ಮಾಡುವ ಅಪಾಯವೂ ಇದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ, ಮೆಟಾ ಸಂಸ್ಥೆಯು ಮೂರು ದಿನಗಳೊಳಗೆ ಸಮಗ್ರ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಈ ವಿಚಾರದಲ್ಲಿ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಜಾರಿಗೊಳಿಸಬಾರದು ಎಂದು ನಿರ್ದೇಶನ ನೀಡಲಾಗಿದೆ.


