ಹೊಸ ಉದ್ಯೋಗಿ ಭವಿಷ್ಯ ನಿಧಿ (EPF) ಯೋಜನೆ ಜಾರಿ; ಕೇಂದ್ರ ಸರ್ಕಾರದಿಂದ 2026 ನಿಯಮಾವಳಿ ಪ್ರಕಟ
ಸಾಮಾಜಿಕ ಭದ್ರತಾ ಸಂಹಿತೆ-2020 (Code on Social Security, 2020) ಜಾರಿಯ ಭಾಗವಾಗಿ ಕೇಂದ್ರ ಸರ್ಕಾರ ಉದ್ಯೋಗಿ ಭವಿಷ್ಯ ನಿಧಿ (Employees’ Provident Fund – EPF) ಯೋಜನೆ-2026 ಅನ್ನು ಅಧಿಕೃತವಾಗಿ ಅಧಿಸೂಚನೆ ಮಾಡಿದೆ. ಈ ಹೊಸ ಯೋಜನೆಯು 1952ರ EPF ಯೋಜನೆಯನ್ನು ಬದಲಿಸಿದೆ.
ಜೂನ್ 29ರಂದು ಅಧಿಕೃತ ಗಜೆಟ್‌ನಲ್ಲಿ ಪ್ರಕಟವಾದ ಈ ಯೋಜನೆ ಈಗ ಜಾರಿಗೆ ಬಂದಿದೆ.
ಹೊಸ ಯೋಜನೆಯ ಉದ್ದೇಶ ಡಿಜಿಟಲ್ ಅನುಸರಣೆ (Digital Compliance) ಬಲಪಡಿಸುವುದು, ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಖಾತೆಗಳ ವರ್ಗಾವಣೆಯನ್ನು (Portability) ಸುಲಭಗೊಳಿಸುವುದು ಹಾಗೂ ಹೊಸ ಕಾರ್ಮಿಕ ಸಂಹಿತೆಗೆ ಅನುಗುಣವಾಗಿ EPF ವ್ಯವಸ್ಥೆಯನ್ನು ಆಧುನೀಕರಿಸುವುದಾಗಿದೆ.
ಯೋಜನೆಯ ಪ್ರಕಾರ, ಉದ್ಯೋಗಿ ಮತ್ತು ಉದ್ಯೋಗದಾತರಿಂದ ಕಡ್ಡಾಯವಾಗಿ ಪಾವತಿಸಬೇಕಾದ ಇಪಿಎಫ್ ಕೊಡುಗೆ ಶೇ.12ರಷ್ಟೇ ಮುಂದುವರಿಯಲಿದೆ. ಕೇಂದ್ರ ಸರ್ಕಾರದಿಂದ ಅಧಿಸೂಚಿತ ಸಂಸ್ಥೆಗಳಿಗೆ ಈಗಿರುವ ಶೇ.10ರ ಕೊಡುಗೆ ದರ ಯಥಾಸ್ಥಿತಿಯಲ್ಲೇ ಇರಲಿದೆ.
ಹೊಸ ನಿಯಮಗಳಲ್ಲಿ ಭಾಗಶಃ ಹಣ ಹಿಂಪಡೆಯುವ (Partial Withdrawal) ವ್ಯವಸ್ಥೆಯನ್ನೂ ಪರಿಷ್ಕರಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ವಿವಾಹ, ಮನೆ ನಿರ್ಮಾಣ ಸೇರಿದಂತೆ ನಿಗದಿತ ಅಗತ್ಯಗಳಿಗೆ ಸದಸ್ಯರು ನಿರ್ದಿಷ್ಟ ಷರತ್ತುಗಳೊಂದಿಗೆ ತಮ್ಮ ನಿಧಿಯಿಂದ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದೇ ವೇಳೆ, ಇ-ಫೈಲಿಂಗ್, ಆನ್‌ಲೈನ್ ಕ್ಲೇಮ್, ಇ-ಪಾಸ್‌ಬುಕ್ ಹಾಗೂ ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರಿಂದ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಭವಿಷ್ಯ ನಿಧಿ ನಿರ್ವಹಣೆ ಮತ್ತಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಲಿದೆ.


