ವಾಯುಪಡೆಯ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ
ಆಪರೇಷನ್ ಸಿಂಧೂರ್ ವೇಳೆ ಮುಖ್ಯ ಸಮಗ್ರ ರಕ್ಷಣಾ ಸಿಬ್ಬಂದಿ (Chief of Integrated Defence Staff) ಆಗಿ ಸೇವೆ ಸಲ್ಲಿಸಿದ್ದ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ (IAF) ಉಪ ಮುಖ್ಯಸ್ಥ (Vice Chief of Air Staff – VCAS) ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ಸುಮಾರು ನಾಲ್ಕು ದಶಕಗಳ ಸೇವೆ ಪೂರ್ಣಗೊಳಿಸಿ ಜೂನ್ 30ರಂದು ನಿವೃತ್ತರಾದ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಯಾದ ಏರ್ ಮಾರ್ಷಲ್ ದೀಕ್ಷಿತ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA), ಬಾಂಗ್ಲಾದೇಶದ ಡಿಫೆನ್ಸ್ ಸ್ಟಾಫ್ ಸರ್ವಿಸ್ ಕಾಲೇಜು ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು 3,500 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ.
ಇದೇ ವೇಳೆ, ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್ ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥ (Vice Chief of Army Staff) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
1988ರ ಜೂನ್ನಲ್ಲಿ ಮಹಾರ್ ರೆಜಿಮೆಂಟ್ಗೆ ಸೇರ್ಪಡೆಯಾದ ಲೆ. ಜನರಲ್ ಸಂದೀಪ್ ಜೈನ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಸುಮಾರು ನಾಲ್ಕು ದಶಕಗಳ ಸೇವೆಯಲ್ಲಿ ವಿವಿಧ ಕಾರ್ಯಾಚರಣಾ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.


