15 ವರ್ಷಗಳ ಬಳಿಕ ನಿರ್ದೇಶಕರಾಗಿ ಥ್ರಿಲ್ಲರ್ ಮಂಜು ಕಮ್‌ಬ್ಯಾಕ್; ಈ ವಾರ ತೆರೆಗೆ ‘ಡೆಡ್ಲಿ ಕಿಲ್ಲರ್’

1 Min Read
1 Min Read

15 ವರ್ಷಗಳ ಬಳಿಕ ನಿರ್ದೇಶಕರಾಗಿ ಥ್ರಿಲ್ಲರ್ ಮಂಜು ಕಮ್‌ಬ್ಯಾಕ್; ಈ ವಾರ ತೆರೆಗೆ ‘ಡೆಡ್ಲಿ ಕಿಲ್ಲರ್’

ಖ್ಯಾತ ಸಾಹಸ ನಿರ್ದೇಶಕ ಹಾಗೂ ಚಿತ್ರ ನಿರ್ದೇಶಕ ಥ್ರಿಲ್ಲರ್ ಮಂಜು ಸುಮಾರು 15 ವರ್ಷಗಳ ಬಳಿಕ ಮತ್ತೆ ನಿರ್ದೇಶಕರಾಗಿ ಮರಳಿದ್ದು, ಅವರ ಹೊಸ ಚಿತ್ರ ‘ಡೆಡ್ಲಿ ಕಿಲ್ಲರ್’ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಪ್ರೇಕ್ಷಕರಿಗೆ ರೋಚಕ ಅನುಭವ ನೀಡುವ ಭರವಸೆ ಮೂಡಿಸಿದೆ.

ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಟಿ. ತಂಬ್ರಳ್ಳಿಮಠ ನಿರ್ಮಿಸಿರುವ ಈ ಚಿತ್ರದಲ್ಲಿ ಅಭಯ್ ವೀರ್ ಮತ್ತು ನಿವೀಕ್ಷಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಥ್ರಿಲ್ಲರ್ ಮಂಜು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಪ್ರಶಾಂತ್, “ನಾಯಕ ಅಭಯ್ ಅವರ ಮೂಲಕ ಥ್ರಿಲ್ಲರ್ ಮಂಜು ಅವರ ಪರಿಚಯವಾಯಿತು. ಟ್ರೈಲರ್‌ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ನೋಡಲು ಸಿನಿಪ್ರೇಕ್ಷಕರು ಕಾತರರಾಗಿದ್ದಾರೆ. ಇದೇ ಶುಕ್ರವಾರ ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, “ಕಾಡಿಗೆ ತಪ್ಪಿಸಿಕೊಳ್ಳುವ ಆರು ಗ್ಯಾಂಗ್‌ಸ್ಟರ್‌ಗಳ ಸುತ್ತ ಕಥೆ ಸಾಗುತ್ತದೆ. ಆದರೆ ಅಲ್ಲಿಯೇ ನಾಯಕನ ಬಲೆಗೆ ಅವರು ಸಿಲುಕುತ್ತಾರೆ. ನಾಯಕ ಅವರನ್ನು ಹೇಗೆ ಪತ್ತೆಹಚ್ಚಿ ಸೆರೆಹಿಡಿಯುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ. ಪ್ರೇಕ್ಷಕರನ್ನು ಕೊನೆಯ ಕ್ಷಣದವರೆಗೂ ಕುತೂಹಲದಲ್ಲಿ ಇಡುವ ರೀತಿಯಲ್ಲಿ ಸಿನಿಮಾ ಮೂಡಿಬಂದಿದೆ” ಎಂದು ಹೇಳಿದರು.

ಚಿತ್ರದ ವಿಶೇಷ ಆಕರ್ಷಣೆಯಾಗಿ ಆರು ಭರ್ಜರಿ ಸಾಹಸ ದೃಶ್ಯಗಳು ಇದ್ದು, ಅವುಗಳಿಗೆ ಸ್ವತಃ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ನಾಯಕಿ ನಿವೀಕ್ಷಾ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರದಲ್ಲಿ ಎರಡು ವಿಭಿನ್ನ ಆಯಾಮಗಳು ಇರಲಿವೆ ಎಂದು ಚಿತ್ರತಂಡ ತಿಳಿಸಿದೆ.

ರೋಚಕ ಕಥಾಹಂದರ, ಸಾಹಸ ದೃಶ್ಯಗಳು ಮತ್ತು ಸಸ್ಪೆನ್ಸ್ ಅಂಶಗಳಿಂದ ಗಮನ ಸೆಳೆದಿರುವ ‘ಡೆಡ್ಲಿ ಕಿಲ್ಲರ್’ ಈ ವಾರ ಪ್ರೇಕ್ಷಕರ ಮುಂದೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

Share This Article