ಜೂ. ಎನ್‌ಟಿಆರ್–ತ್ರಿವಿಕ್ರಮ್ ಚಿತ್ರದ ಪೋಸ್ಟರ್‌ಗೆ ವಿವಾದ; ‘ಮುರುಗನ್ ಉತ್ತರದಲ್ಲಿ ಜನಿಸಿದರು’ ಎಂಬ ಸಾಲಿಗೆ ತೀವ್ರ ಆಕ್ಷೇಪ
ನಟ ಜೂನಿಯರ್ ಎನ್‌ಟಿಆರ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಬಹುನಿರೀಕ್ಷಿತ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಭುಗಿಲೆದ್ದಿದೆ. ಪೋಸ್ಟರ್ ಜೊತೆಗೆ ಪ್ರಕಟಿಸಿದ್ದ “Born in the North. Forged in the Heartland. Worshipped in the South” ಎಂಬ ಟ್ಯಾಗ್‌ಲೈನ್ ಇದೀಗ ಚರ್ಚೆಗೆ ಕಾರಣವಾಗಿದೆ.
ಪೋಸ್ಟರ್‌ನಲ್ಲಿನ ಈ ಸಾಲು ಶ್ರೀ ಮುರುಗನ್ (ಸುಬ್ರಹ್ಮಣ್ಯ ಸ್ವಾಮಿ) ಅವರ ಮೂಲದ ಕುರಿತಂತೆ ತಪ್ಪು ಸಂದೇಶ ನೀಡುತ್ತದೆ ಎಂದು ತಮಿಳುನಾಡಿನ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುರುಗನ್ ತಮಿಳರ ಆರಾಧ್ಯ ದೈವವಾಗಿದ್ದು, ಅವರ ಆರು ಪ್ರಮುಖ ಪವಿತ್ರ ಕ್ಷೇತ್ರಗಳು ತಮಿಳುನಾಡಿನಲ್ಲೇ ಇವೆ. ಹೀಗಾಗಿ ಚಿತ್ರದ ಹೆಸರಿನಲ್ಲಿ ಇತಿಹಾಸ ಅಥವಾ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬಾರದು ಎಂದು ಕೆಲವರು ಆಗ್ರಹಿಸಿದ್ದಾರೆ.
ಇನ್ನೂ ಕೆಲ ನೆಟ್ಟಿಗರು, ಮುರುಗನ್ ತಮಿಳುನಾಡಿಗೆ ಮಾತ್ರ ಸೀಮಿತ ದೇವರಲ್ಲ. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸುಬ್ರಹ್ಮಣ್ಯ ಸ್ವಾಮಿ, ಉತ್ತರ ಭಾರತದಲ್ಲಿ ಕಾರ್ತಿಕೇಯ ಅಥವಾ ಸ್ಕಂದ ರೂಪದಲ್ಲಿ ಆರಾಧಿಸಲ್ಪಡುತ್ತಾರೆ ಎಂದು ಚಿತ್ರದ ಪರವಾಗಿ ವಾದಿಸಿದ್ದಾರೆ. “ಮುರುಗನ್ ವಿಶ್ವದಾದ್ಯಂತ ಹಿಂದೂಗಳ ಆರಾಧ್ಯ ದೈವ” ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರಗೊಂಡಿದ್ದರೂ, ಚಿತ್ರದ ನಿರ್ಮಾಪಕರು ಅಥವಾ ನಿರ್ದೇಶಕರು ಈ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದು, ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ.
ಇದೀಗ ತ್ರಿವಿಕ್ರಮ್ ಶ್ರೀನಿವಾಸ್, ‘ಆದರ್ಶ ಕುಟುಂಬಂ ಹೌಸ್ ನಂ.47 (AK47)’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದೆಡೆ, ಜೂನಿಯರ್ ಎನ್‌ಟಿಆರ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ‘ಡ್ರಾಗನ್’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ 2027ರ ಜೂನ್ 11ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.


