ಬಿಸಿಗಾಳಿ ಎಫೆಕ್ಟ್: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಶಾಲಾ ವೇಳಾಪಟ್ಟಿ ಬದಲಾವಣೆ
ತೀವ್ರ ಬಿಸಿಗಾಳಿ (ಹೀಟ್ವೇವ್) ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿವರೆಗಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿಯ ಆದೇಶದಂತೆ, ಶಾಲೆಗಳು ಇನ್ನು ಮುಂದೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ವಿದ್ಯಾರ್ಥಿಗಳನ್ನು ತೀವ್ರ ಬಿಸಿಲಿನಿಂದ ರಕ್ಷಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ ಸೂಚನೆ ಬರುವವರೆಗೆ ಇದು ಜಾರಿಯಲ್ಲಿರಲಿದೆ.
ಇದೇ ರೀತಿ ಪಿಲಿಭೀತ್ ಜಿಲ್ಲೆಯಲ್ಲಿ ಶಾಲೆಗಳ ಕಾರ್ಯಾವಧಿಯನ್ನು ಬೆಳಿಗ್ಗೆ 7.30ರಿಂದ 11.30ರವರೆಗೆ ನಿಗದಿಪಡಿಸಲಾಗಿದೆ.
ಈ ನಡುವೆ, ವಿದ್ಯಾರ್ಥಿಗಳನ್ನು ಬಿಸಿಲಿನ ತೀವ್ರತೆ, ದೇಹದ ನಿರ್ಜಲೀಕರಣ ಹಾಗೂ ಹೀಟ್ಸ್ಟ್ರೋಕ್ ಅಪಾಯದಿಂದ ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಈಗಾಗಲೇ ಶಿಕ್ಷಕರಿಗೆ ವಿಶೇಷ ಮಾರ್ಗಸೂಚಿಗಳನ್ನು ನೀಡಿದೆ.
ಬಿಸಿಗಾಳಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ.


