ಆನ್‌ಲೈನ್ ಲೋಕಕ್ಕೆ ಟಿಎನ್‌ ಸೀತಾರಾಂ ಅವರ ನ್ಯಾಯಾಂಗ ಪರಂಪರೆ; ‘ದಿ ಡೇಲಿ ಡ್ರಾಪ್’ ಮೂಲಕ ಅಶ್ವಿನಿ ಅನೀಶ್ ಹೊಸ ಹೆಜ್ಜೆ

1 Min Read
1 Min Read

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ನ್ಯಾಯಾಲಯ ಆಧಾರಿತ ಧಾರಾವಾಹಿಗಳಿಗೆ ವಿಶಿಷ್ಟ ಗುರುತನ್ನು ತಂದ ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಕಥನಶೈಲಿ ಇದೀಗ ಡಿಜಿಟಲ್ ವೇದಿಕೆಯಲ್ಲಿ ಹೊಸ ರೂಪ ಪಡೆದುಕೊಂಡಿದೆ. ಅವರ ಪುತ್ರಿ ಅಶ್ವಿನಿ ಅನೀಶ್ ನಿರ್ದೇಶನದ ಮೂಲಕ ‘ದಿ ಡೇಲಿ ಡ್ರಾಪ್’ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ’ ಹಾಗೂ ‘ಮುಕ್ತ ಮುಕ್ತ’ ಮೊದಲಾದ ಧಾರಾವಾಹಿಗಳ ಮೂಲಕ ಕಾನೂನು ಹೋರಾಟ, ನೈತಿಕ ಸಂಘರ್ಷ ಮತ್ತು ತನಿಖಾ ಕಥನಗಳಿಗೆ ಹೊಸ ಆಯಾಮ ನೀಡಿದ್ದ ಟಿ.ಎನ್. ಸೀತಾರಾಂ ಅವರ ಪರಂಪರೆಯನ್ನು ಅಶ್ವಿನಿ ಮುಂದುವರಿಸುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿರುವ ಅವರು, ‘ದಿ ಡೇಲಿ ಡ್ರಾಪ್’ನಲ್ಲಿ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಲೈಫ್‌ಪೇಜಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಆರು ಸಂಚಿಕೆಗಳ ಈ ಕೋರ್ಟ್‌ರೂಮ್ ಥ್ರಿಲ್ಲರ್, 35 ವರ್ಷದ ಅನಘಾ ಎಂಬ ಮಹಿಳೆಯ ಅನುಮಾನಾಸ್ಪದ ಸಾವಿನ ಸುತ್ತ ಹೆಣೆಯಲಾಗಿದೆ. ಆರಂಭದಲ್ಲಿ ಹೃದಯಾಘಾತವೆಂದು ಪರಿಗಣಿಸಲಾದ ಪ್ರಕರಣ, ತನಿಖೆ ಮುಂದುವರಿದಂತೆ ಕೊಲೆ ಶಂಕೆಗೆ ತಿರುಗುತ್ತದೆ.

ಪ್ರಕರಣದ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಮೂಲಕ ನಿಜವಾದ ಅಪರಾಧಿ ಯಾರು, ಕೊಲೆಯ ಹಿಂದಿನ ಉದ್ದೇಶವೇನು ಮತ್ತು ಸತ್ಯವನ್ನು ಹೇಗೆ ಮರೆಮಾಚಲಾಯಿತು ಎಂಬ ಕುತೂಹಲಕಾರಿ ಅಂಶಗಳನ್ನು ಸರಣಿ ಅನಾವರಣಗೊಳಿಸುತ್ತದೆ. ಸಸ್ಪೆನ್ಸ್, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯನ್ನು ಸಮತೋಲನವಾಗಿ ಕಟ್ಟಿಕೊಟ್ಟಿರುವ ‘ದಿ ಡೇಲಿ ಡ್ರಾಪ್’ ಕನ್ನಡ ಡಿಜಿಟಲ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Share This Article