ಚೆನ್ನೈ: ತಮಿಳು ಚಿತ್ರರಂಗದ ದಿಗ್ಗಜ ನಿರ್ದೇಶಕ ಭಾರತಿರಾಜಾ ಅವರ ನಿಧನದ ಬಳಿಕ ಹಲವು ಗಣ್ಯರು ಸಂತಾಪ ಸೂಚಿಸುತ್ತಿರುವ ನಡುವೆ, ಖ್ಯಾತ ಗಾಯಕಿ ಹಾಗೂ ಧ್ವನಿ ಕಲಾವಿದೆ ಬೃಂದಾ ಶಿವಕುಮಾರ್ ಅವರು ಸಂಗೀತದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಟರಾದ ಸೂರ್ಯ ಮತ್ತು ಕಾರ್ತಿ ಅವರ ಸಹೋದರಿ, ಹಿರಿಯ ನಟ ಶಿವಕುಮಾರ್ ಅವರ ಪುತ್ರಿಯಾಗಿರುವ ಬೃಂದಾ, ಭಾರತಿರಾಜಾ ನಿರ್ದೇಶನದ ‘ಕರುತ್ತಮ್ಮ’ ಚಿತ್ರದ ಜನಪ್ರಿಯ ‘ಪೊರಾಳೆ ಪೊನ್ನುತಾಯಿ’ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊಗೆ ಭಾವನಾತ್ಮಕ ಸಂದೇಶವನ್ನು ಕೂಡ ಬರೆದಿರುವ ಬೃಂದಾ, “ಭಾರತಿರಾಜಾ ಅಂಕಲ್ ಅವರಿಗೆ ಹೃತ್ಪೂರ್ವಕ ಸಮರ್ಪಣೆ. ನಾವು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದೆವು. ನಾನು ಶಾಲಾ ದಿನಗಳಲ್ಲಿ ಈ ಹಾಡು ಹಾಡಿದಾಗ ಅಂಕಲ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ಈ ಹಾಡು ಕೇಳಬೇಕೆನಿಸಿದಾಗಲೆಲ್ಲಾ ನನ್ನಿಂದ ಹಾಡಿಸಿಕೊಳ್ಳುತ್ತಿದ್ದರು. ಅಂಕಲ್, ಈ ಹಾಡು ನಿಮಗಾಗಿ,” ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, “ನೀವು ಅದ್ಭುತ ಸೃಷ್ಟಿಕರ್ತ, ಹೊಸ ಟ್ರೆಂಡ್ಗಳನ್ನು ಪರಿಚಯಿಸಿದ ನಿರ್ದೇಶಕ ಹಾಗೂ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಿದ ಮಹಾನ್ ವ್ಯಕ್ತಿ. ಹಲವು ತಲೆಮಾರುಗಳು ಕಲಿಯಬಹುದಾದ ಚಿತ್ರಗಳನ್ನು ನೀವು ನಿರ್ಮಿಸಿದ್ದೀರಿ. ನಿಮ್ಮ ಸೃಷ್ಟಿಗಳ ಮೂಲಕ ನೀವು ಸದಾ ನಮ್ಮೊಂದಿಗೆ ಜೀವಂತವಾಗಿರುತ್ತೀರಿ” ಎಂದು ಗೌರವ ಸಲ್ಲಿಸಿದ್ದಾರೆ.
‘16 ವಯತಿನಿಲೆ’, ‘ಕರುತ್ತಮ್ಮ’ ಸೇರಿದಂತೆ ಹಲವು ಕ್ಲಾಸಿಕ್ ಚಿತ್ರಗಳನ್ನು ನೀಡಿದ ಭಾರತಿರಾಜಾ ಅವರು ಕಳೆದ ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದು ಸಿನಿರಂಗದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಬೃಂದಾ ಶಿವಕುಮಾರ್ ಅವರ ಈ ಸಂಗೀತ ನಮನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅಭಿಮಾನಿಗಳ ಮನಸ್ಸನ್ನೂ ಮುಟ್ಟಿದೆ.


