ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಮತ್ತಷ್ಟು ಸಿನಿಮಾ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರೆ, ಇದೀಗ ವಿಜಯ್ ಸೇತುಪತಿ, ಕೆನ್ ಕರುಣಾಸ್, ಪ್ರಿಯಾಮಣಿ, ಅನಸೂಯಾ ಭರದ್ವಾಜ್ ಸೇರಿದಂತೆ ಹಲವು ನಟ-ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳ ಪರ ಧ್ವನಿಯೆತ್ತಿದ್ದಾರೆ.
ನಟ ವಿಜಯ್ ಸೇತುಪತಿ, ನೀಲಂ ಸ್ಟೂಡೆಂಟ್ಸ್ ಮೂವ್‌ಮೆಂಟ್ (NSM) ಪ್ರಕಟಿಸಿರುವ ಪೋಸ್ಟರ್‌ನ್ನು ಹಂಚಿಕೊಂಡು, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆ ಪೋಸ್ಟರ್‌ನಲ್ಲಿ ವಿದ್ಯಾರ್ಥಿಗಳು, ಕಲಾವಿದರು, ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರರು ಒಗ್ಗೂಡುವಂತೆ ಕರೆ ನೀಡಲಾಗಿದೆ.
ನಟ ಹಾಗೂ ನಿರ್ದೇಶಕ ಕೆನ್ ಕರುಣಾಸ್, “ಪ್ರಜಾಪ್ರಭುತ್ವ ಎಂದರೆ ಜನರಿಗಾಗಿ, ಜನರಿಂದ ನಡೆಯುವ ವ್ಯವಸ್ಥೆ. ನಮ್ಮ ಹಕ್ಕುಗಳಿಗಾಗಿ ಪ್ರಶ್ನಿಸುವುದು ಅಪರಾಧವಲ್ಲ, ಅದು ನಮ್ಮ ಕರ್ತವ್ಯ. ಭಾರತದ ಯುವಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜಿಸಬೇಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಟಿ ಅನಸೂಯಾ ಭರದ್ವಾಜ್, ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಶಾಂತಿಯುತವಾಗಿ ಧ್ವನಿಯೆತ್ತುತ್ತಿರುವುದನ್ನು ಮೆಚ್ಚಿಕೊಂಡಿದ್ದಾರೆ. “ಈ ಪೀಳಿಗೆಯನ್ನು ನಿರ್ಲಕ್ಷ್ಯ ಮತ್ತು ನಿರಾಸಕ್ತಿಯ ಪೀಳಿಗೆ ಎಂದು ಹಲವರು ಟೀಕಿಸಿದ್ದರು. ಆದರೆ ಇಂದು ಅವರು ಪ್ರಶ್ನಿಸುತ್ತಿದ್ದಾರೆ, ತಮ್ಮ ಹಕ್ಕಿಗಾಗಿ ನಿಂತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ” ಎಂದು ಅವರು ಹೇಳಿದ್ದಾರೆ.
ನಟಿ ಪ್ರಿಯಾಮಣಿ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಪ್ರಶ್ನಿಸುವ ಹಾಗೂ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸುವ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ, ನಟಿ ನಜ್ರಿಯಾ ನಜೀಮ್ ಕೂಡ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿರುವುದು ಗಮನ ಸೆಳೆದಿದೆ.


