ಜೂನ್ 19ಕ್ಕೆ ‘ದೊಡ್ಮನ್ಸ’ ರಿಲೀಸ್: ಆಟೋ ಚಾಲಕರಿಗೆ ವಿಶೇಷ ಉಡುಗೊರೆ ಘೋಷಿಸಿದ ಶರತ್ ಕೃಷ್ಣ

1 Min Read
1 Min Read

ಬೆಂಗಳೂರು: ನಟ-ನಿರ್ದೇಶಕ ಶರತ್ ಕೃಷ್ಣ ಅಭಿನಯದ ಹಾಗೂ ನಿರ್ದೇಶನದ ‘ದೊಡ್ಮನ್ಸ’ ಚಿತ್ರದ ಟ್ರೈಲರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಇದೇ ವೇಳೆ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಜೂನ್ 19ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ.

ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶರತ್ ಕೃಷ್ಣ ಅವರೊಂದಿಗೆ ರೇಶ್ಮಾ ಹಾಗೂ ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಆಕ್ಷನ್, ಪ್ರೇಮ ಮತ್ತು ಭಾವನಾತ್ಮಕ ಅಂಶಗಳ ಸಮತೋಲನವನ್ನು ಅನಾವರಣಗೊಳಿಸಲಾಗಿದ್ದು, ವಾಣಿಜ್ಯ ಮನರಂಜನಾ ಚಿತ್ರವಾಗಿ ‘ದೊಡ್ಮನ್ಸ’ ಗಮನ ಸೆಳೆದಿದೆ.

ಟ್ರೈಲರ್‌ನಲ್ಲಿ ಶರತ್ ಕೃಷ್ಣ ಅವರ ಮಾಸ್ ಅವತಾರ, ರೋಚಕ ಸಾಹಸ ದೃಶ್ಯಗಳು ಹಾಗೂ ಭಾವನಾತ್ಮಕ ಪ್ರೇಮಕಥೆಯ ಝಲಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಕೃಷ್ಣ, ನಟನಾಗುವ ಕನಸಿನ ಹಿಂದೆ ಹೋರಾಟ, ಪರಿಶ್ರಮ ಮತ್ತು ಕುಟುಂಬದ ಬೆಂಬಲದ ಮಹತ್ವವನ್ನು ಸ್ಮರಿಸಿದರು. ಯಶಸ್ಸಿನ ಹಾದಿಯಲ್ಲಿ ಕುಟುಂಬದ ಪ್ರೋತ್ಸಾಹ ಮತ್ತು ನಿರಂತರ ಪ್ರಯತ್ನವೇ ದೊಡ್ಡ ಶಕ್ತಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಕರ್ನಾಟಕದ ಆಟೋ ಚಾಲಕರಿಗಾಗಿ ವಿಶೇಷ ಉಪಕ್ರಮವನ್ನು ಘೋಷಿಸಲಾಯಿತು. ರಾಜ್ಯದ ವಿವಿಧ ಭಾಗಗಳ ಆಟೋ ಚಾಲಕರನ್ನು ಚಿತ್ರಮಂದಿರಗಳಿಗೆ ಆಹ್ವಾನಿಸಿ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಶರತ್ ಕೃಷ್ಣ ತಿಳಿಸಿದರು.

ಇದರ ಜೊತೆಗೆ, ಅದೃಷ್ಟಶಾಲಿ ಒಬ್ಬ ಆಟೋ ಚಾಲಕರಿಗೆ ಉಚಿತವಾಗಿ ಆಟೋ ರಿಕ್ಷಾವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿ ಎಲ್ಲರ ಗಮನ ಸೆಳೆದರು.

‘ದೊಡ್ಮನ್ಸ’ ಸಿನಿಮಾ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸವನ್ನು ಶರತ್ ಕೃಷ್ಣ ವ್ಯಕ್ತಪಡಿಸಿದರು.

ಚಿತ್ರಕ್ಕೆ ಅಲೆಕ್ಸ್ ಮತ್ತು ಶ್ರೀಧರ್ ಕಶ್ಯಪ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಬಾಲ ರಾಜವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Share This Article