ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುಜಿಸಿ ನೆಟ್ (UGC NET) ಡಿಸೆಂಬರ್ 2026 ಪರೀಕ್ಷೆಗೆ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಸಹಾಯಕ ಪ್ರಾಧ್ಯಾಪಕರ ಹುದ್ದೆ ಹಾಗೂ ಪಿಎಚ್ಡಿ ಪ್ರವೇಶ ಪಡೆಯಲು ಅರ್ಹತೆ ನಿರ್ಧರಿಸುವ ಈ ಪರೀಕ್ಷೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 8ರಂದು ಆರಂಭವಾಗಿದ್ದು, ಅಕ್ಟೋಬರ್ 28ರ ರಾತ್ರಿ 11.50ರೊಳಗೆ ಅರ್ಜಿ ಮತ್ತು ಪರೀಕ್ಷಾ ಶುಲ್ಕ ಪಾವತಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ₹500 ತಡ ಶುಲ್ಕದೊಂದಿಗೆ ಅಕ್ಟೋಬರ್ 29ರಿಂದ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ನಮೂನೆಯಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಲು ನವೆಂಬರ್ 2ರಿಂದ 4ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿದ್ದು, ಡಿಸೆಂಬರ್ 14ರಿಂದ 19ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ. ಒಟ್ಟು 87 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಯುಜಿಸಿ ನೆಟ್ ಮೂಲಕ ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯಬಹುದು. ಜೊತೆಗೆ, ಸಹಾಯಕ ಪ್ರಾಧ್ಯಾಪಕರ ಅರ್ಹತೆಯೊಂದಿಗೆ ಪಿಎಚ್ಡಿ ಪ್ರವೇಶ ಅಥವಾ ಪಿಎಚ್ಡಿ ಪ್ರವೇಶಕ್ಕೆ ಮಾತ್ರ ಅರ್ಹತೆ ಪಡೆಯುವ ಆಯ್ಕೆಯೂ ಇದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳು, ಪರೀಕ್ಷಾ ನಿಯಮಗಳು ಮತ್ತು ಇತರ ವಿವರಗಳನ್ನು ಅಧಿಕೃತ ಮಾಹಿತಿ ಕೈಪಿಡಿಯಲ್ಲಿ ಪರಿಶೀಲಿಸಬೇಕು. ಅರ್ಜಿ ಸಲ್ಲಿಸುವಾಗ ವೈಯಕ್ತಿಕ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದು ಅಗತ್ಯವಾಗಿದೆ.


