ನವದೆಹಲಿ: ಬ್ರಿಟನ್ನ ವೇಲ್ಸ್ನಲ್ಲಿ ನಡೆದ ‘ಎಕ್ಸರ್ಸೈಸ್ ಕ್ಯಾಂಬ್ರಿಯನ್ ಪೆಟ್ರೋಲ್ 2026’ ಅಂತರರಾಷ್ಟ್ರೀಯ ಸೇನಾ ಅಭ್ಯಾಸದಲ್ಲಿ ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್ನ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ.
ಈ ಕುರಿತು ಭಾರತೀಯ ಸೇನೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 100ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಕಠಿಣ ಗಸ್ತು ಅಭ್ಯಾಸದಲ್ಲಿ ಭಾರತೀಯ ಯೋಧರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದೆ.
ದೈಹಿಕ ಸಹಿಷ್ಣುತೆ, ಯುದ್ಧತಂತ್ರದ ಕೌಶಲ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ಈ ಅಭ್ಯಾಸದಲ್ಲಿ ಅಸ್ಸಾಂ ರೆಜಿಮೆಂಟ್ನ ತಂಡ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಹತ್ತು ತಂಡಗಳ ಪೈಕಿ ಭಾರತೀಯ ತಂಡವೂ ಸ್ಥಾನ ಪಡೆದಿದೆ ಎಂದು ಸೇನೆ ತಿಳಿಸಿದೆ.
ಅಕ್ಟೋಬರ್ 2ರಿಂದ 12ರವರೆಗೆ ನಡೆದ ಈ ಅಭ್ಯಾಸವು ಯೋಧರ ದೈಹಿಕ ಕ್ಷಮತೆ, ಕಾರ್ಯತಂತ್ರದ ನಿರ್ಧಾರಗಳು, ನಾಯಕತ್ವ ಮತ್ತು ತಂಡದ ಸಮನ್ವಯವನ್ನು ಪರೀಕ್ಷಿಸುವ ಕಠಿಣ ಸವಾಲಿನ ಕಾರ್ಯಕ್ರಮವಾಗಿದೆ.
ಅಂತರರಾಷ್ಟ್ರೀಯ ಮಟ್ಟದ ಈ ಸೇನಾ ಅಭ್ಯಾಸದಲ್ಲಿ ಚಿನ್ನದ ಪದಕ ಗಳಿಸಿರುವುದು ಭಾರತೀಯ ಸೇನೆಯ ತರಬೇತಿ, ಶಿಸ್ತು ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಸಾಧನೆಯಾಗಿದೆ.


