ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿರುವ ‘ವಿಕಸಿತ ಭಾರತ ಸಂಕಲ್ಪ ಸಭೆ’ ಇಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರು 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಸಕ್ರಿಯ ಸಾರ್ವಜನಿಕ ಆಡಳಿತದ ಪ್ರಮುಖ ಹಂತ ಪ್ರವೇಶಿಸಿದ್ದರು.
ಕಾರ್ಯಕ್ರಮದ ವಿಶೇಷತೆಯಾಗಿ ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಬಿಜೆಪಿಯ ಹಿರಿಯ ನಾಯಕರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ವಿನೋದ್ ತಾವಡೆ ಭಾಗವಹಿಸಲಿದ್ದಾರೆ.
ಲಖನೌನಿಂದ ಯೋಗಿ ಸೇರಿದಂತೆ ಪ್ರಮುಖ ನಾಯಕರು
ಲಖನೌನ ಹಜರತ್ಗಂಜ್ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯ ಸ್ಥಳದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹಾಗೂ ರಾಜ್ಯ ಸಹ ಉಸ್ತುವಾರಿ ಡಾ. ಮೇಧಾ ಕುಲಕರ್ಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಾರಾಣಸಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಭಾಗವಹಿಸಲಿದ್ದಾರೆ. ನೋಯ್ಡಾದಿಂದ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಘಾಜಿಯಾಬಾದ್ನಿಂದ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಗೆ ಸೇರ್ಪಡೆಯಾಗಲಿದ್ದಾರೆ.
ವಿವಿಧ ಜಿಲ್ಲೆಗಳಿಂದ ಪಕ್ಷದ ನಾಯಕರು, ಕಾರ್ಯಕರ್ತರು ಭಾಗಿ
ಪ್ರಯಾಗ್ರಾಜ್ನಿಂದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಸೀತಾಪುರದಿಂದ ರಾಜ್ಯ ಸಹ ಉಸ್ತುವಾರಿ ಪ್ರದೀಪ್ ವರ್ಮಾ ಹಾಗೂ ಬುಲಂದ್ಶಹರ್ನಿಂದ ರಾಜ್ಯ ಸಹ ಉಸ್ತುವಾರಿ ಅನಂತ್ ಓಜಾ ಭಾಗವಹಿಸಲಿದ್ದಾರೆ.
ಈ ಎಲ್ಲ ಸ್ಥಳಗಳಲ್ಲಿ ಪಕ್ಷದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿಯವರ ಸಾರ್ವಜನಿಕ ಬದುಕಿನ 25 ವರ್ಷಗಳನ್ನು ಗುರುತಿಸುವ ಉದ್ದೇಶದಿಂದ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸೇವೆ ಮತ್ತು ‘ವಿಕಸಿತ ಭಾರತ’ದ ಸಂಕಲ್ಪವನ್ನು ಮುನ್ನೆಲೆಗೆ ತರಲಾಗುತ್ತಿದೆ.


