ಬ್ಯಾಂಕಾಕ್: ಭಾರತೀಯ ಪ್ರವಾಸಿಗರಿಗೆ ಥಾಯ್ಲೆಂಡ್ ಪ್ರವಾಸ ಮತ್ತಷ್ಟು ಸುಲಭವಾಗಲಿದೆ. ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರಿಗೆ ವೀಸಾ ವಿನಾಯಿತಿ ನೀಡಲಾಗಿದ್ದು, ಥಾಯ್ಲೆಂಡ್‌ನಲ್ಲಿ ಗರಿಷ್ಠ 30 ದಿನಗಳವರೆಗೆ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಈ ತಿಂಗಳ 15ರಿಂದ ಜಾರಿಗೆ ಬರಲಿದೆ ಎಂದು ಥಾಯ್ಲೆಂಡ್‌ನ ಗೃಹ ಸಚಿವಾಲಯ ತಿಳಿಸಿದೆ.
ಥಾಯ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದ ಮೂಲಕ ಪ್ರವಾಸಿಗರಿಗೆ ಈ ಕುರಿತು ಹಲವು ಮಾರ್ಗಸೂಚಿಗಳನ್ನು ನೀಡಿದೆ. ಪ್ರವಾಸಿಗರು ಥಾಯ್ಲೆಂಡ್‌ಗೆ ಆಗಮಿಸುವ ದಿನಾಂಕದಿಂದ ಕನಿಷ್ಠ 6 ತಿಂಗಳ ಮಾನ್ಯತೆ ಹೊಂದಿರುವ ಪಾಸ್‌ಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು.
ಇದರೊಂದಿಗೆ ದೃಢೀಕೃತ ವಾಪಸ್ ಪ್ರಯಾಣದ ಟಿಕೆಟ್, ಹೋಟೆಲ್ ಬುಕ್ಕಿಂಗ್ ಹಾಗೂ ಸ್ಪಷ್ಟವಾದ ಪ್ರವಾಸ ಯೋಜನೆ ಮತ್ತು ಪ್ರಯಾಣ ವಿವರಗಳನ್ನು ಹೊಂದಿರುವಂತೆ ರಾಯಭಾರ ಕಚೇರಿ ಸಲಹೆ ನೀಡಿದೆ.
ಥಾಯ್ಲೆಂಡ್ ಡಿಜಿಟಲ್ ಅರೈವಲ್ ಕಾರ್ಡ್ ಕಡ್ಡಾಯ
ಥಾಯ್ಲೆಂಡ್‌ಗೆ ಆಗಮಿಸುವ ಮೊದಲು 72 ಗಂಟೆಗಳ ಒಳಗೆ Thailand Digital Arrival Card (TDAC) ಅನ್ನು ಅಧಿಕೃತ ವಲಸೆ ಇಲಾಖೆಯ ವೆಬ್‌ಸೈಟ್ ಮೂಲಕ ಪೂರ್ಣಗೊಳಿಸಬೇಕು.
ವೀಸಾ ವಿನಾಯಿತಿ ಸೌಲಭ್ಯದಲ್ಲಿ ಒಳಪಡದ ಉದ್ದೇಶಕ್ಕಾಗಿ ಥಾಯ್ಲೆಂಡ್‌ಗೆ ಪ್ರಯಾಣಿಸುವವರು ತಮ್ಮ ಪ್ರಯಾಣದ ಉದ್ದೇಶಕ್ಕೆ ಅನುಗುಣವಾದ ಸೂಕ್ತ ವೀಸಾ ಪಡೆದುಕೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
₹? ಹಣವಲ್ಲ, 20 ಸಾವಿರ ಥಾಯ್ ಬಹ್ತ್ ನಗದು ಇರಲಿ
ವೀಸಾ ವಿನಾಯಿತಿ ಸೌಲಭ್ಯ ಬಳಸಿಕೊಳ್ಳುವ ಪ್ರವಾಸಿಗರು ಪ್ರತಿ ಪ್ರಯಾಣಿಕನಿಗೆ ಕನಿಷ್ಠ 20,000 ಥಾಯ್ ಬಹ್ತ್ ನಗದು ಹೊಂದಿರುವಂತೆ ಸಲಹೆ ನೀಡಲಾಗಿದೆ.
ವಲಸೆ ತಪಾಸಣಾ ಕೌಂಟರ್‌ಗೆ ತೆರಳುವಾಗ ಅಗತ್ಯ ದಾಖಲೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಇಟ್ಟುಕೊಳ್ಳಬೇಕು. ಗುಂಪಿನಲ್ಲಿ ಪ್ರಯಾಣಿಸುವವರಾದರೂ ಪ್ರತಿಯೊಬ್ಬರೂ ತಮ್ಮದೇ ಅಗತ್ಯ ದಾಖಲೆಗಳನ್ನು ಪ್ರತ್ಯೇಕವಾಗಿ ಹೊಂದಿರಬೇಕು.
ಥಾಯ್ಲೆಂಡ್‌ನಲ್ಲಿ ಉದ್ಯೋಗದ ಆಫರ್ ಪಡೆದಿರುವವರು ವೀಸಾ ವಿನಾಯಿತಿ ಸೌಲಭ್ಯ ಬಳಸಬಾರದು ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಹಾಗೆಯೇ, ಥಾಯ್ಲೆಂಡ್ ಮೂಲಕ ಬೇರೆ ದೇಶಕ್ಕೆ ಪ್ರಯಾಣಿಸುವವರು ತಮ್ಮ ಅಂತಿಮ ಗಮ್ಯಸ್ಥಾನಕ್ಕೆ ಅಗತ್ಯವಿರುವ ದಾಖಲೆಗಳು ಮತ್ತು ವೀಸಾಗಳನ್ನು ಹೊಂದಿರಬೇಕು.


