ಫಿನ್‌ಟೆಕ್ ಬೆಳವಣಿಗೆಗೆ ವೇಗ, ಹೂಡಿಕೆದಾರರ ರಕ್ಷಣೆಗೆ ಆದ್ಯತೆ: ಸೆಬಿ ಅಧ್ಯಕ್ಷರ ಕರೆ

1 Min Read
1 Min Read

ಮುಂಬೈ: ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಜತೆಗೆ ಹೂಡಿಕೆದಾರರ ರಕ್ಷಣೆ ಮತ್ತು ಮಾರುಕಟ್ಟೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಮುಂಬೈನಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಸೆಕ್ಯುರಿಟೀಸ್ ಆಯೋಗಗಳ ಸಂಸ್ಥೆ (IOSCO) ಫಿನ್‌ಟೆಕ್ ಕಾರ್ಯಪಡೆಯ ಪೂರ್ಣ ಸಭೆಗೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿ ಅವರು ಮಾತನಾಡಿದರು. ಈ ಸಭೆಯು ಗ್ಲೋಬಲ್ ಫಿನ್‌ಟೆಕ್ ಫೆಸ್ಟಿವಲ್ 2026ರ ಅಂಗವಾಗಿ ನಡೆಯುತ್ತಿದೆ.

ಫಿನ್‌ಟೆಕ್ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆವಿಷ್ಕಾರ ಮತ್ತು ನಿಯಂತ್ರಣದ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಸೆಬಿ ಅಧ್ಯಕ್ಷರು ಒತ್ತಿ ಹೇಳಿದರು. ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಹಣಕಾಸು ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಅವಕಾಶ ಕಲ್ಪಿಸುವುದು ಮುಖ್ಯವಾಗಿದೆ ಎಂದರು.

IOSCO ಫಿನ್‌ಟೆಕ್ ಕಾರ್ಯಪಡೆಯು ವಿವಿಧ ದೇಶಗಳ ಸೆಕ್ಯುರಿಟೀಸ್ ನಿಯಂತ್ರಣ ಸಂಸ್ಥೆಗಳನ್ನು ಒಗ್ಗೂಡಿಸಿ, ಹಣಕಾಸು ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಹಾಗೂ ಅವುಗಳಿಂದ ಎದುರಾಗುವ ನಿಯಂತ್ರಣ ಸಂಬಂಧಿತ ಸವಾಲುಗಳನ್ನು ಪರಿಶೀಲಿಸುತ್ತದೆ.

ಕಾರ್ಯಪಡೆಯು ಇದುವರೆಗೆ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ತುಹಿನ್ ಕಾಂತ ಪಾಂಡೆ ಶ್ಲಾಘಿಸಿದರು.

ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟಿವಲ್ ಸೆಪ್ಟೆಂಬರ್ 8ರಿಂದ 11ರವರೆಗೆ ಆಯೋಜಿಸಲಾಗಿದ್ದು, ಇದರ ಹಿನ್ನೆಲೆಯಲ್ಲಿ IOSCO ಫಿನ್‌ಟೆಕ್ ಕಾರ್ಯಪಡೆಯ ಪೂರ್ಣ ಸಭೆ ನಡೆಯುತ್ತಿದೆ.

Share This Article