ಕಠ್ಮಂಡು: ಮಧ್ಯ ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 157 ಮಂದಿ ಮೃತಪಟ್ಟಿದ್ದಾರೆ. 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯ ಪ್ರಜೆಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.
ಟಿಬೆಟ್ ಪ್ರದೇಶದಿಂದ ಆರಂಭವಾದ ಪ್ರವಾಹವು ನೇಪಾಳದ ಹಲವು ಪಟ್ಟಣಗಳು ಮತ್ತು ಗ್ರಾಮಗಳನ್ನು ತೀವ್ರವಾಗಿ ಬಾಧಿಸಿದೆ. ಪ್ರವಾಹದ ರಭಸಕ್ಕೆ ಪ್ರಮುಖ ಸೇತುವೆಗಳು ಕೊಚ್ಚಿಹೋಗಿದ್ದು, ಹಲವು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ.
ಭೂಕಂಪದ ಬೆನ್ನಲ್ಲೇ ಪ್ರವಾಹ
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಕಾಲಮಾನ ಬೆಳಗ್ಗೆ 8.37ಕ್ಕೆ ಟಿಬೆಟ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ಇದಾದ ಕೇವಲ ಮೂರು ನಿಮಿಷಗಳ ಬಳಿಕ ಹಠಾತ್ ಪ್ರವಾಹದ ವರದಿಗಳು ಬಂದಿದ್ದವು ಎಂದು ತಿಳಿಸಿದ್ದಾರೆ.
ಭೂಕಂಪನದ ಕಂಪನದಿಂದ ಹಿಮನದಿ ಪ್ರದೇಶದಲ್ಲಿ ಏಕಾಏಕಿ ನೀರಿನ ಹೊರಹರಿವು ಉಂಟಾಗಿ ಪ್ರವಾಹ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಸುವಾ ಜಿಲ್ಲೆಯ ಗಡಿ ಪಟ್ಟಣವಾದ ಟಿಮುರೆಯಲ್ಲಿ ಭೋಟೆ ಕೋಶಿ ನದಿಯ ಮೂಲಕ ಪ್ರವಾಹವು ತ್ರಿಶೂಲಿ ನದಿಗೆ ನುಗ್ಗಿದೆ. ನೇಪಾಳ–ಟಿಬೆಟ್ ಗಡಿಯಲ್ಲಿರುವ ಲ್ಹೆಂಡೆ ನದಿಯಲ್ಲಿ ಬಂಡೆ ಕುಸಿತ ಹಾಗೂ ನೀರಿನ ಮಟ್ಟ ಏರಿಕೆಯಾಗಿರುವುದು ಪ್ರವಾಹಕ್ಕೆ ಪ್ರಮುಖ ಕಾರಣವೆಂದು ತಿಳಿಸಲಾಗಿದೆ.
ಪ್ರವಾಹವು ನದಿಯ ಹರಿವಿನ ದಿಕ್ಕಿನಲ್ಲಿ ನುವಾಕೋಟ್, ಚಿತ್ವಾನ್, ಗೋರಖಾ, ತನಹು ಮತ್ತು ನವಲಪರಾಸಿ ಪೂರ್ವ ಜಿಲ್ಲೆಗಳಿಗೂ ವ್ಯಾಪಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಸುಮಾರು 200 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಗಳು ಪ್ರವಾಹದ ಪರಿಣಾಮಕ್ಕೆ ಒಳಗಾಗಿವೆ.
100ಕ್ಕೂ ಹೆಚ್ಚು ಜನರ ರಕ್ಷಣೆ
ನೇಪಾಳ ಪೊಲೀಸರ ಪ್ರಕಾರ ಪ್ರವಾಹದಲ್ಲಿ 157 ಮಂದಿ ಮೃತಪಟ್ಟಿದ್ದಾರೆ. ನೇಪಾಳ ಸರ್ಕಾರದ ಮಾಹಿತಿ ಪ್ರಕಾರ ಸುಮಾರು 500 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮದ ವರದಿ ಪ್ರಕಾರ, ಗಡಿಯಾಚೆ ಚೀನಾದ ಭಾಗದಲ್ಲಿ ಮೂವರು ಮೃತಪಟ್ಟಿದ್ದು, 265 ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಹ ಪೀಡಿತ ವಿವಿಧ ಪ್ರದೇಶಗಳಿಂದ ಸುಮಾರು 100 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ 30 ಮಂದಿಯನ್ನು ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಹದ ರಭಸದಲ್ಲಿ ಕೆಸರು, ಬಂಡೆಗಳು ಮತ್ತು ಅವಶೇಷಗಳು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಹಲವು ಪ್ರದೇಶಗಳಲ್ಲಿ ಕಂಡುಬಂದಿವೆ.
ಭಾರತೀಯರ ರಕ್ಷಣೆಗೆ ತುರ್ತು ಸಹಾಯವಾಣಿ
ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಾಧ್ಯವಿರುವ ಎಲ್ಲ ಮಾನವೀಯ ನೆರವು ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಲೇಂದ್ರ ಶಾ ಅವರು ಭಾರತದ ಬೆಂಬಲ ಮತ್ತು ನೆರವಿಗೆ ಧನ್ಯವಾದ ತಿಳಿಸಿದ್ದಾರೆ.
ಭಾರತ ಈಗಾಗಲೇ ನೇಪಾಳಕ್ಕೆ ಪರಿಹಾರ ಸಾಮಗ್ರಿಗಳ ಮೊದಲ ಹಂತದ ನೆರವನ್ನು ಕಳುಹಿಸಿದೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ನೆರವು ಹಾಗೂ ಮಾಹಿತಿ ಪಡೆಯಲು +977 985 131 6807 ಮತ್ತು +977 970 910 7500 ತುರ್ತು ಸಂಖ್ಯೆಯನ್ನು ಪ್ರಕಟಿಸಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯು 1234 ಟೋಲ್ಫ್ರೀ ತುರ್ತು ಸಂಖ್ಯೆ, 1144 ಹಾಟ್ಲೈನ್ ಹಾಗೂ ಪ್ರವಾಸಿ ಪೊಲೀಸರ 9851289445 ಸಂಖ್ಯೆಯನ್ನು ಸಹ ಬಿಡುಗಡೆ ಮಾಡಿದೆ.
ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 0086 185 1428 4905 ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದ್ದು, ವಾಟ್ಸ್ಆ್ಯಪ್ ಮೂಲಕವೂ ಸಂಪರ್ಕಿಸಬಹುದಾಗಿದೆ.
ನಾಪತ್ತೆಯಾದ ಭಾರತೀಯರಲ್ಲಿ ಕನಿಷ್ಠ 50 ಮಂದಿ ಕೈಲಾಸ ಮಾನಸ ಸರೋವರ ಯಾತ್ರಿಕರು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಮತ್ತು ಕೇರಳ ಸೇರಿದಂತೆ ಹಲವು ರಾಜ್ಯಗಳು ಕೂಡ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿವೆ.
20ಕ್ಕೂ ಹೆಚ್ಚು ದೇಶಗಳ ಪ್ರವಾಸಿಗರು ನಾಪತ್ತೆ
ಭಾರತೀಯರು ಮತ್ತು ಅನಿವಾಸಿ ಭಾರತೀಯರ ಹೊರತಾಗಿ ಅಮೆರಿಕ, ಮಲೇಷ್ಯಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನೆದರ್ಲ್ಯಾಂಡ್ಸ್ ಸೇರಿದಂತೆ ಎರಡು ಡಜನ್ಗೂ ಹೆಚ್ಚು ದೇಶಗಳ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದು, ನೇಪಾಳ ಸೇನೆಯ 44 ಸಿಬ್ಬಂದಿ ಸೇರಿದಂತೆ 80 ಭದ್ರತಾ ಸಿಬ್ಬಂದಿ ವಿವಿಧ ಪ್ರದೇಶಗಳಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಲವಿದ್ಯುತ್ ಯೋಜನೆ, ಸೇತುವೆಗಳಿಗೆ ಭಾರೀ ಹಾನಿ
ಪ್ರವಾಹದಿಂದ ಒಟ್ಟು 354 ಮೆಗಾವ್ಯಾಟ್ ಸಾಮರ್ಥ್ಯದ ಎಂಟು ಕಾರ್ಯನಿರ್ವಹಿಸುತ್ತಿದ್ದ ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ನುವಾಕೋಟ್ ಮತ್ತು ರಾಸುವಾ ಜಿಲ್ಲೆಗಳಲ್ಲಿರುವ ನಿರ್ಮಾಣ ಹಂತದ ಐದು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.
ಇದಲ್ಲದೆ, 19 ವಾಹನ ಸಂಚಾರಕ್ಕೆ ಯೋಗ್ಯವಾದ ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಚೀನಾದಲ್ಲೂ ಶೋಧ ಕಾರ್ಯಾಚರಣೆ ಚುರುಕು
ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಅವರು ನಾಪತ್ತೆಯಾದವರಿಗಾಗಿ ಸಮರೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.
ಕ್ಸಿಗಾಜೆ ವಿಭಾಗದ ಪೀಪಲ್ಸ್ ಆರ್ಮ್ಡ್ ಪೊಲೀಸ್ ಪಡೆಯ 145 ಅಧಿಕಾರಿಗಳು ಮತ್ತು ಯೋಧರನ್ನು ಗಡಿ ಪ್ರದೇಶಕ್ಕೆ ಕಳುಹಿಸಲಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದಾರೆ.
ಮುನ್ನೆಚ್ಚರಿಕೆ ಮತ್ತು ಮುನ್ಸೂಚನಾ ವ್ಯವಸ್ಥೆಯನ್ನು ಬಲಪಡಿಸುವುದು, ವೈಜ್ಞಾನಿಕ ವಿಧಾನದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಹಾಗೂ ಮತ್ತಷ್ಟು ವಿಪತ್ತುಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಶಿ ಜಿನ್ಪಿಂಗ್ ಸೂಚಿಸಿದ್ದಾರೆ.
ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಪ್ರವಾಹದಿಂದ ಸಂಭವಿಸಿರುವ ಜೀವಹಾನಿ ಮತ್ತು ಆಸ್ತಿ ನಷ್ಟಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


