ಸುರಕ್ಷಿತ ಮತ್ತು ಕಾನೂನುಬದ್ಧ ಉದ್ಯೋಗ ವಲಸೆಗೆ ಭಾರತ ಒತ್ತಾಯ; ಎರಡು ದಿನಗಳ ವೇದಿಕೆ ಮುಕ್ತಾಯ

1 Min Read
1 Min Read

ಜಾಗತಿಕ ಉದ್ಯೋಗಾವಕಾಶಗಳಿಗೆ ಭಾರತ ಒತ್ತು; ಮಾನವ ಸಂಪನ್ಮೂಲ ಚಲನಶೀಲತೆ ವೇದಿಕೆ ಯಶಸ್ವಿ ಸಮಾರೋಪ

ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಾನವ ಸಂಪನ್ಮೂಲ ಚಲನಶೀಲತೆ (Human Resource Mobility) ವೇದಿಕೆ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ವೇದಿಕೆಯನ್ನು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ನಿನ್ನೆ ಉದ್ಘಾಟಿಸಿದ್ದರು.

ಜಾಗತಿಕ ಮಟ್ಟದಲ್ಲಿ ಸುರಕ್ಷಿತ, ಕಾನೂನುಬದ್ಧ ಹಾಗೂ ಸುವ್ಯವಸ್ಥಿತ ಉದ್ಯೋಗ ವಲಸೆಯನ್ನು ಉತ್ತೇಜಿಸುವ ಉದ್ದೇಶದಿಂದ, ಕೇಂದ್ರ ಸಚಿವಾಲಯಗಳು, ವಿದೇಶಿ ಸರ್ಕಾರಗಳು, ಉದ್ಯೋಗದಾತರು ಹಾಗೂ ನೇಮಕಾತಿ ಸಂಸ್ಥೆಗಳಿಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿರುವ ಮೊದಲ ಕಾರ್ಯಕ್ರಮ ಇದಾಗಿದೆ.

ವೇದಿಕೆಯ ವೇಳೆ ಡೆನ್ಮಾರ್ಕ್, ಜರ್ಮನಿ, ಇಟಲಿ, ಜಪಾನ್ ಹಾಗೂ ರಷ್ಯಾ ಸೇರಿದಂತೆ ಭಾರತವು ಉದ್ಯೋಗ ಚಲನಶೀಲತೆ ಕುರಿತ ವಿಶೇಷ ಒಪ್ಪಂದ ಮಾಡಿಕೊಂಡಿರುವ ಐದು ರಾಷ್ಟ್ರಗಳೊಂದಿಗೆ ಪ್ರತ್ಯೇಕ ಅಧಿವೇಶನಗಳು ನಡೆದವು.

ಈ ಅಧಿವೇಶನಗಳಲ್ಲಿ ಭಾರತೀಯ ಕಾರ್ಮಿಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳು, ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆ ವ್ಯವಸ್ಥೆ ಹಾಗೂ ಕೌಶಲ್ಯ ಆಧಾರಿತ ಉದ್ಯೋಗ ಸಹಕಾರ ಕುರಿತಂತೆ ಅರ್ಥಪೂರ್ಣ ಚರ್ಚೆಗಳು ನಡೆದವು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ್ದ ಡಾ. ಜೈಶಂಕರ್, ಜಾಗತಿಕ ಮಟ್ಟದಲ್ಲಿ ಕಾನೂನುಬದ್ಧ ಉದ್ಯೋಗ ವಲಸೆಯನ್ನು ಬಲಪಡಿಸುವುದು ಮತ್ತು ಶೋಷಣಾತ್ಮಕ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಎಲ್ಲ ರಾಷ್ಟ್ರಗಳ ಜಂಟಿ ಜವಾಬ್ದಾರಿ ಎಂದು ತಿಳಿಸಿದ್ದರು.

ಇದೇ ವೇಳೆ, ಸುರಕ್ಷಿತ ಹಾಗೂ ಪಾರದರ್ಶಕ ವಿದೇಶ ಉದ್ಯೋಗ ಪ್ರಕ್ರಿಯೆಗೆ ನೆರವಾಗುತ್ತಿರುವ eMigrate 2.0 ಪೋರ್ಟಲ್ ಕಾರ್ಯವನ್ನು ಅವರು ಶ್ಲಾಘಿಸಿದರು. ಈ ವೇದಿಕೆ ಜಾಗತಿಕ ಪ್ರತಿಭೆಗಳ ಚಲನಶೀಲತೆಗೆ ಹೊಸ ದಿಕ್ಕು ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Share This Article